

ಹಾಸನ : ಬಿಜೆಪಿಯವರು ಯಾರನ್ನು ಬೇಕಾದರೂ ವಿಲನ್ ಮಾಡುತ್ತಾರೆ. ಅವರ ಹುಟ್ಟುಗುಣವೇ ಸಮಾಜ ಒಡೆಯುವ ಕೆಲಸವಾಗಿದೆ. ಬಿಜೆಪಿ ಅವರು ಸಮಾಜದಲ್ಲಿ ಇಲ್ಲದೆ ಇರುವ ವ್ಯಕ್ತಿಗಳನ್ನು ಅವರೇ ಸೃಷ್ಟಿ ಮಾಡುತ್ತಾರೆ ಎಂದು ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಉರಿಗೌಡ, ನಂಜೇಗೌಡ ವಿಚಾರವಾಗಿ ಸಿ.ಟಿ.ರವಿ ಹೇಳಿಕೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಶುಕ್ರವಾರಸಂತೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಹುಟ್ಟುಗುಣವೇ ಸಮಾಜ ಒಡೆಯುವ ಕೆಲಸವಾಗಿದೆ. ಸಮಾಜದಲ್ಲಿ ರಾವಣ ವೃತ್ತಿಯನ್ನು ಯಾರು ಮಾಡಿರ್ತರೆ ಅವರನ್ನು ಹೀರೋ, ರಾಮನನ್ನು ಮಾಡಿ ಜೀವನ ಮಾಡುತ್ತಿದ್ದಾರೆ. ಇವರಿಗೆ ಸಮಾಜದಲ್ಲಿ ಇರುವ ಇತಿಹಾಸವನ್ನು ತಿರುಚಿ, ಇವರ ಸ್ವಯಂಕೃತ ಆಸೆ, ಆಕಾಂಕ್ಷೆಗಳಿಗೆ ಇವತ್ತು ಸಮಾಜವನ್ನು ಕಲುಷಿತಗೊಳಿಸುವ ಇಂತಹ ಕೀಳು ಅಭಿರುಚಿಯ ಜನಗಳು ಇರುವುದರಿಂದಲೇ ಇವತ್ತು ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಕಾಣ್ತಾ ಇದ್ದೇವೆ ಎಂದು ಕಿಡಿಕಾರಿದ್ದಾರೆ.
ಟಿಪ್ಪು ಸಿದ್ದಾಂತವನ್ನು ಒಪ್ಪುವುದಾದರೆ ಹಾಸನವನ್ನು ಕೈಮಾಬಾದ್ ಅಂತ ಕರೆಯಲು ಹೆಸರಿಟ್ಟಿದ್ದರು ಎಂಬ ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಎಚ್ಡಿಕೆ, ಚಿಕ್ಕಮಗಳೂರು ಏನು ಮಾಡಬೇಕಂತೆ, ಏನು ಮಾಡಬೇಕು ಅಂತ ಹೇಳಬೇಕಲ್ಲ. ಹಾಸನ ಜಿಲ್ಲೆಯನ್ನು ಏನು ಮಾಡಬೇಕು ಅಂತಾ ಸಿ.ಟಿ.ರವಿಯಂತಹ ಲೂಟಿಕೋರರಿಂದ ನಾನು ಕಲಿಯಬೇಕಿಲ್ಲ. ಈ ಜಿಲ್ಲೆಯ ಜನ ಗೌರವಸ್ತರಿದ್ದಾರೆ. ಈ ಜಿಲ್ಲೆಯ ಜನ ಇವತ್ತು ಬೆಂಬಲ ಕೊಡೋದು, ಆಶೀರ್ವಾದ ಮಾಡೋದು ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ಅಂತ ಕರೆ ಕೊಟ್ಟಿದ್ದಾರಲ್ಲಾ ಅಂತ ವ್ಯಕ್ತಿಗಳಿಗೆ ಇಲ್ಲಿ ಮಣೆ ಹಾಕೋದು ಎಂದಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಟಿಪ್ಪು ಇತಿಹಾಸ, ಇವರ ಇತಿಹಾಸ ಯಾವುದು ಇಲ್ಲಾ. ಇಲ್ಲಿರುವುದು ಸರ್ವಜನಾಂಗದ ಶಾಂತಿಯ ತೋಟದ ಇತಿಹಾಸ ಮಾತ್ರವಾಗಿದೆ. ಹಾಸನ ಜಿಲ್ಲೆ ಕ್ಷೇಮವಾಗಿದೆ. ಹಾಸನ ಜಿಲ್ಲೆಯ ಜನತೆ ಇವತ್ತು ನೆಮ್ಮದಿಯಿಂದ ಇದ್ದಾರೆ. ಇಂತಹ ಸಿ.ಟಿ.ರವಿಯಂತ ವ್ಯಕ್ತಿಗಳು ಬಂದು ಹಾಸನ ಕಲುಷಿತ ಆಗುವುದು ಬೇಡ ಅಂಥಾ ಹೇಳಲು ಬಯಸುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.