ಕಾರಿನ ಗಾಜು ಒಡೆದು 50 ಲಕ್ಷ ರೂ. ದರೋಡೆ; ಹಾವೇರಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್

Haveri Police
Published on

ಹಾವೇರಿ: ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಅಂತಾರಾಜ್ಯ ದರೋಡೆಕೋರರನ್ನು ಹಾವೇರಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಅಂಥೋನಿ ಲೂಯಿಸ್, ಅಬ್ಬಾಸ್ ಇ.ಎಸ್. ಪಿರಾಯಿರಿ, ನಿಶಾದಬಾಬು ಹಮೀದ್ ಹಾಗೂ ಭರತ ಕುಮಾರ ಕುಟ್ಟಾ ಬಂಧಿತ ಅಂತರ್​ರಾಜ್ಯ ಖದೀಮರು.

ನವೆಂಬರ್ 21ರಂದು ರಾತ್ರಿ ಮೈಸೂರು ಮೂಲದ ಮಹೇಶ ನಾಂಗ್ರೆ ಎಂಬುವರು ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಮೂರು ಕಾರುಗಳಲ್ಲಿ ದರೋಡೆಕೋರರು ಬಂದು ಮಹೇಶ ಅವರ ಕಾರು ಅಡ್ಡಗಟ್ಟಿದ್ದಾರೆ. ನಂತರ ಕಬ್ಬಿಣದ ರಾಡುಗಳಿಂದ ಕಾರಿನ ಗಾಜು ಒಡೆದು, ಕಾರಿನಲ್ಲಿದ್ದ 50 ಲಕ್ಷ ರೂ. ನಗದು ಹಾಗೂ ಒಂದು ಕಾರು ದರೋಡೆ ಮಾಡಿದ್ದರು.

ಖದೀಮರು ಕಾರಿನಲ್ಲಿದ್ದ ಮಹೇಶ ಹಾಗೂ ಜತೆಗಿದ್ದ ಹೃಷಿಕೇಶ ಅವರ ಕಣ್ಣಿಗೆ ಬಟ್ಟೆ ಕಟ್ಟಿ ದೂರದಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ಎಚ್ಚೆತ್ತ ಎಸ್​ಪಿ ಹನುಮಂತರಾಯ, ಎಎಸ್​ಪಿ ವಿಜಯಕುಮಾರ ಸಂತೋಷ, ಡಿವೈಎಸ್​ಪಿ ಶಿವಾನಂದ ಚಲವಾದಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಿದ್ಧಾರೂಢ ಬಡಿಗೇರ ನೇತೃತ್ವದ ತಂಡ ಆರೋಪಿಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಐಷಾರಾಮಿ ಆಡಿ ಕಾರು, ಇನ್ನೋವಾ ಸೇರಿ ಐದು ಕಾರು, 34 ಲಕ್ಷ ರೂ. ನಗದು, ಸ್ಮಿತ್ ಕಂಪನಿಯ ಗನ್, ಬುಲೆಟ್​ಗಳು, ಡಮ್ಮಿ ವಾಕಿಟಾಕಿಗಳು, ಪ್ರೆಸ್ ಸ್ಟಿಕರ್, ಮಂಕಿ ಕ್ಯಾಪ್, 3 ಲ್ಯಾಪ್‌ಟಾಪ್, 4 ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಸಿದ್ಧಾರೂಢ ಬಡಿಗೇರ ನೇತೃತ್ವದ ತಂಡಕ್ಕೆ ಎಸ್​​ಪಿ ಹನುಮಂತರಾಯ ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net