

ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ (WFI) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಡಬ್ಲ್ಯುಎಫ್ಐನ ಉನ್ನತ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ವಿಷಯ ತಿಳಿಯುತ್ತಿದ್ದಂತೆ ತೀವ್ರ ಅಸಮಾಧಾನಗೊಂಡ ಒಲಿಂಪಿಕ್ ಪದಕ ವಿಜೇತೆ, ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಕುಸ್ತಿ ಜಗತ್ತಿಗೆ ಇದೀಗ ಗುಡ್ಬೈ ಹೇಳಿದ್ದಾರೆ.
ಸಂಜಯ್ ಸಿಂಗ್ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಯನ್ನು ತ್ಯಜಿಸುವ ನಿರ್ಧಾರಕ್ಕೆ ಬಂದ ಸಾಕ್ಷಿ ಮಲಿಕ್, "ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಇದೀಗ ಸಂಜಯ್ ಸಿಂಗ್ ಆಯ್ಕೆಯಾಗಿದ್ದು, ಮಹಿಳಾ ಕುಸ್ತಿಪಟಿಗಳ ಮೇಲಿನ ಲೈಂಗಿಕ ಕಿರುಕುಳ ಮುಂದುವರಿಯಲಿದೆ" ಎಂದರು.
"ಅಲ್ಲದೆ, ದೇಶದಲ್ಲಿ ಹೇಗೆ ನ್ಯಾಯವನ್ನು ಹುಡುಕಿಕೊಳ್ಳಬೇಕು ಎಂಬುದರ ಸುಳಿವು ಇಲ್ಲ. ನಮ್ಮ ಕುಸ್ತಿ ವೃತ್ತಿಯ ಭವಿಷ್ಯದ ಕತ್ತಲಲ್ಲಿದೆ. ನಾವು ಎಲ್ಲಿಗೆ ಹೋಗಬೇಕು ಎಂಬುದು ತಿಳಿಯುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಸಾಕ್ಷಿ ಮಲಿಕ್ ಕುಸ್ತಿ ತ್ಯಜಿಸಿದ ಸುದ್ದಿ ತಿಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಬ್ರಿಜ್ ಭೂಷಣ್, "ಅವರ ನಿರ್ಧಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದರು,(ಏಜೆನ್ಸೀಸ್).