

ಗಂಗೊಳ್ಳಿ: ಮಕ್ಕಳು ತಂದೆ ತಾಯಿಯರ ಸದಾಶಯಗಳಿಗೆ ಪೂರಕವಾಗಿ ಅಧ್ಯಯನ ನಡೆಸಬೇಕು. ಶಾಲೆ ಸಾಧನೆಗಳ ಮಾರ್ಗದಲ್ಲಿ ಮುನ್ನಡೆಯುತ್ತಿದ್ದು, ಮಕ್ಕಳೂ ತಾವು ಪ್ರತಿಭೆಯ ಚಿಲುಮೆಗಳಾಗಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಸರಿಯಾಗಿ ಸಾಧನೆ ನಡೆಸಿ, ಶಾಲೆಗೂ, ಪಾಲಕರಿಗೆ, ನಾಡಿಗೂ ಕೀರ್ತಿ ತರುವಂತವರಾಗಬೇಕು ಎಂದು ಪ್ರಾಂಶುಪಾಲ ಶರಣಕುಮಾರ ಹೇಳಿದರು.
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಆರತಿಬೆಳಗಿ ತಿಲಕವನ್ನಿಟ್ಟು ಸಿಹಿತಿಂಡಿ ನೀಡಿ ಶಿಕ್ಷಕರು ಶಾಲೆಗೆ ಸ್ವಾಗತಿಸಿದರು. ಮೊದಲ ದಿನವೇ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ಸಲುವಾಗಿ ವಿವಿಧ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಹ ಶಿಕ್ಷಕ ಶ್ರೀಮಧು ಶಿಕ್ಷಣದ ಉದ್ದೇಶ ಸಾರುವ ಗೀತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿತು. ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕರು ಮತ್ತು ಶಿಕ್ಷಕೇತರರು ಉಪಸ್ಥಿತರಿದ್ದರು.