

ಪಡುಬಿದ್ರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಐದನೇ ರ್ಯಾಂಕ್ ಗಳಿಸಿದ ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆ ವಿದ್ಯಾರ್ಥಿ ಸಮರ್ಥ್ ಆರ್.ಜೋಷಿ ಅವರನ್ನು ಸರಸ್ವತಿ ಮಂದಿರ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.
ಸಂಸ್ಥೆಗೆ ಉತ್ತಮ ಅಂಕ ಬರುವಲ್ಲಿ ಶ್ರಮಿಸಿದ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ ತಾಯಿ ಬಿಸಿಯೂಟದ ಸಿಬ್ಬಂದಿ ಅನಿತಾ ಜೋಷಿ ಅವರನ್ನು ಗೌರವಿಸಲಾಯಿತು.
ಹಿರಿಯ ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯಶಿಕ್ಷಕಿ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಸಂಚಾಲಕ ಮೋಹನ್ದಾಸ್ ಶೆಟ್ಟಿ ಶುಭಾಶಂಸನೆಗೈದರು. ಪ್ರೌಢಶಾಲಾ ಮುಖ್ಯಶಿಕ್ಷಕ ಬಾಬುರಾಯ ಆಚಾರ್ಯ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಆಶಾ ದಿನೇಶ್ ಸುವರ್ಣ, ಶಿಕ್ಷಕ ವೃಂದ, ಪಾಲಕರು ಮತ್ತು ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಚಂದ್ರಶೇಖರ್ ಶೆಟ್ಟಿ ಪೊಲ್ಯ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸತೀಶ್ ಕುಲಾಲ್ ವಂದಿಸಿದರು. ಹಳೇ ವಿದ್ಯಾರ್ಥಿಗಳಾದ ಕಾಂತಿ ಆಚಾರ್ಯ, ಸುರೇಖಾ ಶೈಲೇಶ್, ಪ್ರಶಾಂತ್ ಉಚ್ಚಿಲ ಕಾರ್ಯಕ್ರಮ ಸಂಯೋಜಿಸಿದರು.