

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ. ಸಾವಿನ ಕಾರಣ ಪತ್ತೆಹಚ್ಚಲು ಸಮಿತಿ ರಚಿಸಿದೆ. ಇದೀಗ ತಾಂತ್ರಿಕ ಸಮಿತಿ ಪ್ರಾಥಮಿಕ ವರದಿ ಸಿದ್ಧ ಪಡಿಸಿದ್ದು, ವರದಿಯಲ್ಲಿ ಶಾಕಿಂಗ್ ತಿಳಿದು ಬಂದಿದೆ.
Heart Attacks: ಹಾಸನ ಜಿಲ್ಲೆಯಲ್ಲಿ ಕೇವಲ 42 ದಿನಗಳಲ್ಲಿ 26 ಮಂದಿ ಬಲಿ ಆಗಿದ್ದಾರೆ. ಇದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಹೃದಯಾಘಾತಗಳು ಹೆಚ್ಚಾಗುತ್ತಿರುವ ಕುರಿತಂತೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ಸಂಗ್ರಹಿಸಲಾಗಿದೆ.
ಸಾವಿಗೆ ಕಾರಣ ಏನು ಅನ್ನೋದನ್ನ ತಿಳಿಯಲು ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. 10 ದಿನದಲ್ಲೇ ವರದಿ ನೀಡುವಂತೆ 12 ಜನ ತಜ್ಞರ ಸಮಿತಿಗೆ ಸರ್ಕಾರ ಸೂಚಿಸಿತ್ತು. ಇದರ ಬೆನ್ನಲ್ಲೇ ಇದೀಗ ಪ್ರಾಥಮಿಕ ವರದಿಯನ್ನು ತಜ್ಞರು ಸಿದ್ಧ ಪಡಿಸಿದ್ದಾರೆ. ಹಾಸನದಲ್ಲಿ ಹೃದಯಾಘಾತದ ಸರಣಿ ಮುಂದುವರೆದಿದ್ದು, ಹೃದಯಾಘಾತಕ್ಕೆ ಒಟ್ಟು 26 ಮಂದಿ ಬಲಿ ಆಗಿದ್ದಾರೆ. ಬಾಣಂತಿ, ಯುವಕರು ಅಷ್ಟೇ ಅಲ್ಲ ಸರ್ಕಾರಿ ಆಸ್ಪತ್ರೆ ವೈದ್ಯನೇ ಹಾರ್ಟ್‌ಅಟ್ಯಾಕ್‌ಗೆ ಬಲಿ ಆಗಿದ್ದಾರೆ.
ಧೂಮಪಾನ, ಮದ್ಯಪಾನ, ಅತಿಯಾದ ಬೊಜ್ಜು, ಮಾಂಸ ಸೇವನೆ ಮತ್ತು ಫಾಸ್ಟ್ ಫುಡ್ ಸೇವನೆಯಿಂದ ಸಾವು ಸಂಭವಿಸಿರುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ರೆಡ್ ಮೀಟ್ ಸೇವನೆಯಿಂದ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಆಳವಾದ ಅಧ್ಯಯನ ಮಾಡಲು ತಾಂತ್ರಿಕ ಸಮಿತಿ ನಿರ್ಧಾರ ಕೈಗೊಂಡಿದೆ. ವರದಿ ಸಲ್ಲಿಸಲು ಕೇವಲ ಒಂದು ವಾರ ಕಾಲಾವಕಾಶ ಇದ್ದು, ಅಷ್ಟರ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
(ಏಜೆನ್ಸೀಸ್)
ಸರಣಿ ಸಾವು ಎಲ್ಲರ ಅಲರ್ಟ್‌ಗೆ ಕಾರಣವಾಗಿದೆ. ರಾಜ್ಯದ 86 ತಾಲೂಕುಗಳಲ್ಲಿ ಇರುವ ಸ್ಟೆಮಿ ಯೋಜನೆಯನ್ನ ಎಲ್ಲಾ ತಾಲೂಕಿಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಇದರ ನಡುವೆ ಹಾರ್ಟ್ಅಟ್ಯಾಕ್ ವೇಳೆ ರೋಗಿಯ ಎದೆಯನ್ನ ಒತ್ತಿ ಹೃದಯ ಬಡಿತವನ್ನ ಮರುಚಾಲನೆಗೊಳಿಸುವ ಪ್ರಾಥಮಿಕ ಚಿಕಿತ್ಸಾ ಕ್ರಮದ ಬಗ್ಗೆ ಎಲ್ಲರಿಗೂ ತರಬೇತಿ ನೀಡಲು ಆರೋಗ್ಯ ಇಲಾಖೆ ಸಜ್ಜಾಗಿದೆ.