

ಹಾಸನ: ಮಂಡ್ಯದ ಹಾಸ್ಟೆಲ್ನಲ್ಲಿ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನಿಗೆ ಹುಡುಗಿಯರೆಲ್ಲ ಸೇರಿ ಥಳಿಸಿದ ಘಟನೆ ಮಾಸುವ ಮುನ್ನವೇ ಹಾಸನದಲ್ಲಿ ಅದೇ ರೀತಿಯ ಘಟನೆ ವರದಿಯಾಗಿದೆ.
ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಸತಿ ಶಾಲೆಯಲ್ಲಿ 10ಕ್ಕೂ ಹೆಚ್ಚು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲರ ನೀಚ ಕೃತ್ಯ ಬಯಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಾಂಶುಪಾಲ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳಿಗೆ ಗುಡ್ ಟಚ್ ಬ್ಯಾಟ್ ಟಚ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು, ಮಕ್ಕಳ ಜೊತೆ ಸಮಾಲೋಚನೆ ನಡೆಸಿದಾಗ ಕೃತ್ಯ ಬಯಲಾಗಿದೆ.
51 ವರ್ಷದ ಪ್ರಾಂಶುಪಾಲರನ್ನು ನ್ಯಾಯಾಂಗ ಬಂಧನಕ್ಕೆ ಹಾಸನ ಪೊಲೀಸರು ಒಪ್ಪಿಸಿದ್ದಾರೆ. 30-35 ಮಕ್ಕಳಿರೋ ವಸತಿ ಶಾಲೆಯಲ್ಲಿ 15 ಮಕ್ಕಳಿಗೆ ಆರೋಪಿ ಪ್ರಾಂಶುಪಾಲ ಲೈಂಗಿಕ ಕಿರುಕುಳ ನಡೆದಿರುವುದು ಗಂಭೀರ ಸಂಗತಿ ಎಂದು ಹಾಸನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಬಗ್ಗೆ ಹಿಂದೆ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದ ಬಗ್ಗೆಯೂ ಆಪಾದನೆ ಕೇಳಿ ಬಂದಿದೆ. ಈ ಪ್ರಕರಣ ಮುಚ್ಚಿ ಹಾಕಲು ಯಾರಾದರೂ ಒತ್ತು ನೀಡದ್ರೆ ಅವರ ಮೇಲೂ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪೊಲೀಸ್ ವರಿಷ್ಠಾಧಿಕಾರಿ ನೀಡಿದ್ದಾರೆ.
ಸದ್ಯ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಅರಕಲಗೂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)