ಸರ್ಕಾರವೇ ನಕ್ಸಲ್‌ರಿಗೆ ಶರಣಾಯಿತೇ?, ವಿಪ ಸದಸ್ಯ ಸಿ.ಟಿ. ರವಿಯ ಅನುಮಾನ ಏನು?

12 ckm 1 c.t.ravi
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು.
Published on

ವಿಜಯಪುರ: ರಾಜ್ಯದಲ್ಲಿ ಆರು ನಕ್ಸಲ್‌ರು ಸರ್ಕಾರಕ್ಕೆ ಶರಣಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅನುಮಾನ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ‘ನಕ್ಸಲ್‌ರು ಸರ್ಕಾರಕ್ಕೆ ಶರಣಾಗಿದ್ದಾರೋ ಅಥವಾ ಸರ್ಕಾರವೇ ನಕ್ಸಲ್‌ರಿಗೆ ಶರಣಾಗಿದೆಯೋ’ ಎಂದು ಪ್ರಶ್ನಿಸಿದರು.

ನಕ್ಸಲ್‌ರೇ ಸರ್ಕಾರಕ್ಕೆ ಶರಣಾಗಿದ್ದರೆ ಕಂಡೀಶನ್‌ಗಳನ್ನು ಹಾಕಿರುವುದೇಕೆ? ಶರಣಾದ ನಕ್ಸಲ್‌ರ ಶಸ್ತ್ರಾಸ್ತ್ರಗಳು ಎಲ್ಲಿ? ಬಂದೂಕು-ಬಾಂಬ್‌ಗಳೇನಾದರೂ ಇದ್ದವಾ? ಬಚ್ಚಿಟ್ಟಿರುವ ಶಸ್ತ್ರಾಸ್ತ್ರಗಳ ಬಗ್ಗೆ ಏಕೆ ಸ್ಪಷ್ಟಪಡಿಸಿಲ್ಲ? ಎಂದು ಪ್ರಶ್ನಿಸಿದ ರವಿ, ಸಂಗತಿ ಅಸ್ಪಷ್ಟವಾಗಿರುವ ಕಾರಣ ಅನುಮಾನ ಕಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಲ್ಲದೇ, ನಕ್ಸಲ್‌ರ ಹಾದಿ ತಪ್ಪಾಗಿದೆ. ಅವರಿಗೆ ನೆರವು ನೀಡಿದವರನ್ನೂ ಗುರುತಿಸಬೇಕು. ಅವರ ಹಿಂದಿರುವವರನ್ನೂ ಪತ್ತೆ ಹಚ್ಚಿ ತನಿಖೆ ಮಾಡಬೇಕು. ಸಂವಿಧಾನದ ಮೇಲೆ ನಂಬಿಕೆ ಇರುವವರು ಬ್ಯಾಲೆಟ್ ಮೇಲ್ನೆ ನಂಬಿಕೆ ಇಡುತ್ತಾರೆ-ಬುಲೆಟ್ ಮೇಲಲ್ಲ. ಸಂವಿಧಾನ ವಿರೋಧಿ ನಡೆಯನ್ನು ಬೆಂಬಲಿಸುವವರು ಸಂವಿಧಾನ ವಿರೋಧಿ ಎಂದರು. ಸಿಎಂ ಸಿದ್ದರಾಮಯ್ಯ ಅವರ ಒಡ್ಡೋಲಗದಲ್ಲಿರುವವರು ಸಹ ಅಂಥ ವಿಚಾರಧಾರೆಯವರೇ ಎಂದು ಆಪಾದಿಸಿದರು.

ಮಾಜಿ ಸಚಿವ ಎನ್. ಮಹೇಶ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಚಂದ್ರಶೇಖರ ಕವಟಗಿ, ಗುರು ಕಾಮಾ, ಈರಣ್ಣ ರಾವೂರ, ಸಾಬು ಮಾಶ್ಯಾಳ, ಚಿದಾನಂದ ಚಲವಾದಿ, ಉಮೇಶ ಕಾರಜೋಳ, ವಿವೇಕಾನಂದ ಡಬ್ಬಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net