

ವಿಜಯಪುರ: ಬಾಣಂತಿಯರು, ಎಳೆಯ ಕಂದಮ್ಮಗಳು, ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರ ಸರಣಿ ಸಾವಿನಿಂದಾಗಿ ಕರ್ನಾಟಕ ಸಾವಿನ ಮನೆಯಾಗಿದ್ದು, ಸಂವೇದನೆ ಕಳೆದುಕೊಂಡ ಹಾಗೂ ಹೃದಯ ಹೀನ ಕಾಂಗ್ರೆಸ್ ಸರ್ಕಾರ ಮಾತ್ರ ‘ಡಿನ್ನರ್ ಪಾಲಿಟಿಕ್ಸ್’ನಲ್ಲಿ ತೊಡಗಿಸಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿಕಾರಿದರು.
ರಾಜ್ಯದಲ್ಲಿ ಇತ್ತಿಚೆಗಷ್ಟೇ 2008 ಕ್ಕೂ ಹೆಚ್ಚು ಆತ್ಮಹತ್ಯೆಗಳಾಗಿವೆ. ನೂರಾರು ರೈತರು, ಅಧಿಕಾರಿಗಳು, ಗುತ್ತಿಗೆದಾರರು ಸಾವಿಗೆ ಶರಣಾಗುತ್ತಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮನಃಸ್ಥಿತಿಯೇ ಕಾರಣ. ಇಷ್ಟೆಲ್ಲಾ ಸಾವು-ನೋವುಗಳಾಗುತ್ತಿದ್ದರೂ ಕಾಂಗ್ರೆಸ್‌ಗೆ ಕರುಣೆ ಇಲ್ಲ. ಇವರಿಗೆ ಸ್ವಲ್ಪವಾದರೂ ಬಸವ ತತ್ವದ ಮೇಲೆ ನಂಬಿಕೆ ಇದ್ದರೆ ಸರಣಿ ಸಾವಿಗೆ ಕಾರಣ ತಿಳಿಸಬೇಕು. ಪರಿಹಾರ ಕಂಡುಕೊಳ್ಳಬೇಕು ಅದಕ್ಕಾಗಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ಬಾಣಂತಿಯರ ಸಾವಿಗೆ ವೈದ್ಯರ ನಿರ್ಲಕ್ಷೃ ಕಾರಣವೇ? ಅತಿಮಾನುಷ ಶಕ್ತಿಗಳೇನಾದರೂ ಇವೆಯಾ ಎಂಬುದನ್ನು ಪತ್ತೆ ಹಚ್ಚಬೇಕಲ್ಲವೇ? ಔಷಧ ಸರಿಯಾಗಿಲ್ಲದಿದ್ದರೆ ಕೊಲೆ ಮೊಕದ್ದಮೆ ದಾಖಲಿಸಬೇಕು. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಕಾರಣವೇನಾದರೂ ಇದ್ದರೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಡಿನ್ನರ್ ಪಾಲಿಟಿಕ್ಸ್‌ನಲ್ಲಿ ತೊಡಗಿಸಿಕೊಂಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆದಾಗ ಸಂವೇದನೆ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಒಬ್ಬರಿಗೆ ಸಿಎಂ ಸ್ಥಾನ ಉಳಿಸಿಕೊಳ್ಳುವ ಚಿಂತೆಯಾದರೆ ಇನ್ನೊಬ್ಬರಿಗೆ ಸಿಎಂ ಸ್ಥಾನದ ಮೇಲೆ ಕುಳಿತುಕೊಳ್ಳುವ ಚಿಂತೆ. ಇದರ ಮಧ್ಯೆ ರಾಜ್ಯದ ಜನ ಸಾವಿಗೀಡಾಗುತ್ತಿದ್ದಾರೆಂದು ರವಿ ಕಳವಳ ವ್ಯಕ್ತಪಡಿಸಿದರು.
ಸತ್ತಿರುವವರಲ್ಲಿ ಬಹುತೇಕ ಬಡವರು, ದಲಿತರು, ಹಿಂದುಳಿದವರು. ಸರ್ಕಾರಿ ಆಸ್ಪತ್ರೆಗೆ ಬಡವರೇ ಬರೋದು. ಹೀಗಾಗಿ ಈ ಸಾವುಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರಲ್ಲದೇ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ ಬದಲು ದೌರ್ಜನ್ಯ ಮಾಡುವುದು ಯಾವ ನ್ಯಾಯ? ಮೀಸಲಾತಿ ಕೇಳಿದ ಪಂಚಮಸಾಲಿಗರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರ ಆಶಾ ಕಾರ್ಯಕರ್ತೆಯರು ಧರಣಿ ಮಾಡಿದರೂ ನಿರ್ಲಕ್ಷೃ ವಹಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಈ ಅವಧಿಯಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು, ರುದ್ರೇಶ ಯಡವಣ್ಣವರ ಎಂಬ ಪ್ರಭಾವಿ ಮಂತ್ರಿಯ ಪಿಎ ಆತಹತ್ಯೆ ಮಾಡಿಕೊಂಡರು, ಗದಗನಲ್ಲಿ ನಿರ್ಮಿತಿ ಕೇಂದ್ರ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಬಿಲ್ ಪಾವತಿಸದ ಹಿನ್ನೆಲೆ ಗುತ್ತಿಗೆದಾರರು ಮರಣ ಪತ್ರ ಬರೆದಿಟ್ಟು ಸಾಯುತ್ತಿದ್ದಾರೆ ಎಂದ ಸಿ.ಟಿ. ರವಿ, ಕಾಂಗ್ರೆಸ್ ಸಾಧನೆ ಎಂದರೆ-ಮುಡಾ ಹಗರಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಹಗರಣ, ಬೋವಿ ನಿಗಮದಲ್ಲಿ ಹಗರಣ, ಅಬಕಾರಿ ಇಲಾಖೆಯಲ್ಲಿ ಹಗರಣ, ಸೀಟ್ ಬ್ಲಾಕಿಂಗ್ ಹಗರಣ, ವಾಲ್ಮೀಕಿ ನಿಗಮದ ಹಗರಣಗಳೇ ಸಾಧನೆಯಾಗಿವೆಯಾ? ಬಸ್ ಟಿಕೆಟ್ ದರ, ಸ್ಟಾಂಪ್ ಪೇಪರ್ ದರ, ಹಾಲು- ಆಲ್ಕೋಹಾಲ್ ದರ ಏರಿಕೆ ಮಾಡಿರುವುದೇ ಸಾಧನೆಯಾ? ಎಂದು ಪ್ರಶ್ನಿಸಿದರು. ಶೇ. 60 ಕ್ಕಿಂತಲೂ ಹೆಚ್ಚಿನ ಭ್ರಷ್ಟಾಚಾರ ನಡೆಸಿದ್ದೀರಿ ಎಂದು ಆಪಾದಿಸಿದರು.
ಮಾಜಿ ಸಚಿವ ಎನ್. ಮಹೇಶ ಮಾತನಾಡಿ, ಈ ಸರ್ಕಾರ ಸಂವೇದನಾ ರಹಿತ ಸರ್ಕಾರ. ಭ್ರಷ್ಟಾಚಾರದ ಸರ್ಕಾರ. ಅಭಿವೃದ್ಧಿ ಶೂನ್ಯ ಸರ್ಕಾರ. ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗದೇ ತತ್ತರಿಸಿರುವ ಸರ್ಕಾರ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಜನರ ಮೇಲೆ ದರ ಏರಿಕೆ ಮಾಡುತ್ತಿರುವ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ವಿಶೇಷವಾಗಿ ಅಬಕಾರಿ ಇಲಾಖೆ ಮದ್ಯದ ಮೇಲಿನ ದರ ಹೆಚ್ಚಿಸಿದೆ. ಸಾರಿಗೆ ಸಚಿವರು ಶಕ್ತಿ ಯೋಜನೆಯಿಂದ ಇಲಾಖೆಗೆ ಲಾಭ ಆಗಿದೆ ಎನ್ನುತ್ತಾರೆ. ಹಾಗಿದ್ದರೆ ದರ ಹೆಚ್ಚಿಸಿದ್ದೇಕೆ? ಇದೆಲ್ಲ ಗ್ಯಾರಂಟಿ ಯೋಜನೆ ಹೊಂದಿಸಲು ಮಾಡಿರುವ ಅಪರಾತಪರಾ ಆರ್ಥಿಕ ನೀತಿ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಚಂದ್ರಶೇಖರ ಕವಟಗಿ, ಗುರು ಕಾಮಾ, ಈರಣ್ಣ ರಾವೂರ, ಸಾಬು ಮಾಶ್ಯಾಳ, ಚಿದಾನಂದ ಚಲವಾದಿ ಮತ್ತಿತರರಿದ್ದರು.