

ನವದೆಹಲಿ: ಕಳೆದ ಅನೇಕ ದಿನಗಳಿಂದಲೂ ಆರ್ಬಿಐ 2,000 ರೂಪಾಯಿಯ ನೋಟುಗಳನ್ನು ಮುದ್ರಿಸುತ್ತಿಲ್ಲ. ಎಟಿಎಂಗಳಲ್ಲೂ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿವೆ. ಖೋಟಾ ನೋಟು ಜಾಲದಲ್ಲಿ ಹೆಚ್ಚಾಗಿ 2,000 ರೂಪಾಯಿ ನಕಲಿ ನೋಟುಗಳೇ ಮುದ್ರಣವಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಮುದ್ರಣ ನಿಲ್ಲಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರ ಬಂದಿತ್ತು.
2000 ರೂಪಾಯಿ ನೋಟುಗಳ ಚಲಾವಣೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅದು ರದ್ದುಗೊಳ್ಳಲಿದೆ ಎಂಬರ್ಥದ ಪೋಸ್ಟ್ಗಳು ಹರಿದಾಡುತ್ತಿದ್ದವು. ಆರ್ಬಿಐ 2,000 ರೂಪಾಯಿಗಳನ್ನು ಶೀಘ್ರವೇ ನಿಲ್ಲಿಸಲಿದೆ. ಅದರ ಬದಲು 1000 ರೂಪಾಯಿ ನೋಟುಗಳನ್ನು ಮುದ್ರಿಸಿ, ಚಲಾವಣೆಗೆ ಬಿಟ್ಟಿದೆ ಎಂದು ಫೇಸ್ಬುಕ್, ವಾಟ್ಸ್ಆ್ಯಪ್, ಯೂಟ್ಯೂಬ್ಗಳಂತಹ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಜತೆಗೆ 1,000 ರೂ.ನೋಟಿನ ಫೋಟೋಗಳನ್ನೂ ವೈರಲ್ ಮಾಡಲಾಗಿತ್ತು.
ಆದರೆ ನಿಜಕ್ಕೂ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 1,000 ರೂ.ನೋಟುಗಳನ್ನು ಮುದ್ರಿಸಿದೆಯಾ? ಅದು ಜನಸಾಮಾನ್ಯರಿಗೆ ಲಭ್ಯವಾಗುತ್ತಿದೆಯಾ ಎಂಬ ಬಗ್ಗೆ ಕೇಂದ್ರ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ.
ಆರ್ಬಿಐ ಹೊಸದಾಗಿ 1,000 ರೂ.ನೋಟುಗಳ ಮುದ್ರಿಸಿ, ಚಲಾವಣೆಗೆ ಬಿಟ್ಟಿದೆ ಎಂಬುದು ಒಂದು ಗಾಳಿಸುದ್ದಿಯಷ್ಟೇ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಅದರ ಫೋಟೋಗಳೂ ನಕಲಿ ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ಪಿಐಬಿ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) 1,000 ರೂ.ನೋಟುಗಳ ಬಗ್ಗೆ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗಗೊಂಡಿದೆ.
2,000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸಲು, ಎಟಿಎಂಗಳಲ್ಲಿ ಹಾಕದೆ ಇರುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್ಗಳಿಗೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿಯೂ ಸಹ ಸುಳ್ಳು. ಯಾವ ಬ್ಯಾಂಕ್ಗಳಿಗೂ ಅವರು ಸೂಚನೆ ನೀಡಿಲ್ಲ ಎಂದು ಪಿಐಬಿ ಟ್ವಿಟರ್ನಲ್ಲಿ ತಿಳಿಸಿದೆ.