VIDEO: ಆಸ್ಟ್ರೇಲಿಯಾದಲ್ಲಿ ಟಾಯ್ಲೆಟ್ ಪೇಪರ್​ ಸಿಗದಿದ್ದವರೆಲ್ಲ ಈ ಪತ್ರಿಕೆ ಖರೀದಿಗೆ ಮುಗಿಬೀಳುತ್ತಿದ್ದಾರಂತೆ...

Toilet Rolls 7 mrch 20
Published on

ಸಿಡ್ನಿ: ಕೊರೊನಾ ವೈರಸ್ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಲವು ವಸ್ತುಗಳ ಕೊರತೆಗೂ ಕಾರಣವಾಗಿದೆ. ಆಸ್ಟ್ರೇಲಿಯಾ, ಸಿಂಗಪೂರ್​ನಂತಹ ಕೆಲವು ದೇಶಗಳಲ್ಲಿ ಮಾಸ್ಕ್​, ಟಾಯ್ಲೆಟ್ ಪೇಪರ್​, ಹ್ಯಾಂಡ್​ ಸ್ಯಾನಿಟೈಸರ್​ನಂತಹ ಸ್ವಚ್ಛತಾ ವಸ್ತುಗಳ ಬೇಡಿಕೆ ಹೆಚ್ಚಿದ್ದು, ಪೂರೈಕೆಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಕೊರೊನಾ ಭೀತಿಯಿಂದ ಈ ವಸ್ತುಗಳನ್ನೆಲ್ಲ ತಯಾರಿಸುವ ಕಾರ್ಖಾನೆಗಳೂ ಕೆಲವೆಡೆ ಮುಚ್ಚಲ್ಪಟ್ಟಿವೆ. ಆಸ್ಟ್ರೇಲಿಯಾ, ಚೀನಾ ಸೇರಿ ಕೆಲವು ದೇಶಗಳಲ್ಲಿ ಟಾಯ್ಲೆಟ್​ ಪೇಪರ್​ಗಳ ಅಗತ್ಯ ಎಷ್ಟು ಕಾಡುತ್ತಿದೆಯೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಸಂಬಂಧಪಟ್ಟ ಹ್ಯಾಷ್​ಟ್ಯಾಗ್​ಗಳು ಟ್ರೆಂಡ್ ಆಗುತ್ತಿವೆ. (#ToiletPaperEmergency (#ToiletPaperApocalypse). ಒಂದರ್ಥದಲ್ಲಿ ಟಾಯ್ಲೆಟ್ ಪೇಪರ್​ಗಳ ಕೊರತೆಯಿಂದ ಜನರು ಕಂಗಾಲಾಗಿದ್ದಾರೆ ಎಂದೇ ಹೇಳಬಹುದು.

ಹೀಗಿರುವಾಗ ಆಸ್ಟ್ರೇಲಿಯಾದ ನ್ಯೂಸ್​ ಪೇಪರ್​ವೊಂದು ವಿಭಿನ್ನ ನಿರ್ಧಾರ ತೆಗೆದುಕೊಂಡಿದೆ. ಹೆಚ್ಚುವರಿ ಪುಟಗಳನ್ನು ತನ್ನ ಓದುಗರಿಗೆ ನೀಡುತ್ತಿದೆ. The NT News ಎಂಬ ಪತ್ರಿಕೆ ಈ ಸಮಯದಲ್ಲಿ ಜನರಿಗೆ ಅನುಕೂಲ ಮಾಡಿಕೊಡುತ್ತ, ತನ್ನ ಪ್ರಸರಣವನ್ನೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

#toiletpapercrisis ಎಂಬ ಹ್ಯಾಷ್​ಟ್ಯಾಗ್​ನಡಿ ವಿಡಿಯೋ ಪೋಸ್ಟ್ ಮಾಡಿರುವ ದಿ ಎನ್​ಟಿ ನ್ಯೂಸ್​ ಪತ್ರಿಕೆ, ಹೆಚ್ಚುವರಿ ಪುಟಗಳನ್ನು ಮುದ್ರಿಸಿದ್ದನ್ನು ತೋರಿಸಿದೆ. ಟಾಯ್ಲೆಟ್​ ಪೇಪರ್​ಗಳನ್ನಾಗಿ ಬಳಸಬಹುದಾದ ಪುಟಗಳನ್ನು ಖಾಲಿಯಾಗಿ ಹಾಗೇ ಬಿಟ್ಟಿದೆ. ಅದರಲ್ಲಿ ಯಾವುದೇ ಸುದ್ದಿಯನ್ನೂ ಪ್ರಕಟಿಸಿಲ್ಲ.

ಒಟ್ಟು ಎಂಟು ಪುಟಗಳನ್ನು ಅಂದರೆ ನಾಲ್ಕು ಹಾಳೆಗಳನ್ನು ಹೆಚ್ಚುವರಿಯಾಗಿ ಇಟ್ಟಿದ್ದು, ಅದನ್ನು ಸುಲಭವಾಗಿ ಟಾಯ್ಲೆಟ್​ ಪೇಪರ್​ನಂತೆ ಕತ್ತರಿಸಬಹುದಾಗಿದೆ.

ಈ ವಿಡಿಯೋ ಟ್ವಿಟರ್​ನಲ್ಲಿ ಪೋಸ್ಟ್ ಆಗುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದೆ. ಮಾರ್ಚ್​ 5ರಿಂದ ಇಲ್ಲಿಯವರೆಗೆ ಸುಮಾರು 3ಲಕ್ಷದ 47 ಸಾವಿರ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. 1.7 ಸಾವಿರ ರೀಟ್ವೀಟ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net