

ನವದೆಹಲಿ: ತನ್ನೊಂದಿಗೆ ಬೈಕ್ನಲ್ಲಿ ಬರಲು ನಿರಾಕರಿಸಿದ ಮಹಿಳೆಯ ಮೇಲೆ ಬೈಕ್ ಸವಾರನೊಬ್ಬ ಹೆಲ್ಮೆಟ್ನಿಂದ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಕಮಲ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮಹಿಳೆ ಮತ್ತು ಆರೋಪಿ ಇಬ್ಬರು ಅಕ್ಕಪಕ್ಕದ ಮನೆಯ ನಿವಾಸಿಗಳು. ಬೈಕ್ನಲ್ಲಿ ತನ್ನೊಂದಿಗೆ ಬರಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ಹೆಲ್ಮೆಟ್ನಿಂದ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ಗುರುಗ್ರಾಮದ ಎಸಿಪಿ ಮನೋಜ್ ಕೆ. ತಿಳಿಸಿದ್ದಾರೆ.
ಘಟನೆ ಸಂಬಂಧಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಟೋ ಮುಂದೆ ಬೈಕ್ ನಿಲ್ಲಿಸಿಕೊಂಡಿರುವ ಆರೋಪಿ, ಮಹಿಳೆಯ ಜತೆ ವಾಗ್ವಾದಕ್ಕೆ ಇಳಿಯುತ್ತಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾಳ್ಮೆ ಕಳೆದುಕೊಳ್ಳುವ ಆರೋಪಿ ಕಮಲ್, ಮಹಿಳೆಯ ಮೇಲೆ ಹೆಲ್ಮೆಟ್ನಿಂದ ದಾಳಿ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆಟೋ ಚಾಲಕ ಮಧ್ಯಪ್ರವೇಶಿಸಿದಾಗ ತನ್ನ ಹ್ಯಾಂಡ್ ಬ್ಯಾಗ್ನಿಂದ ಮಹಿಳೆ ಆರೋಪಿ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿದ್ದಾಳೆ. ಬಳಿಕ ಅಲ್ಲಿಯೇ ಇದ್ದ ಮಹಿಳೆಯರು ಮಧ್ಯಪ್ರವೇಶಿಸಿ ಜಗಳನ್ನು ಬಿಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳ ಅಡಿಯಲ್ಲಿ ಆರೋಪಿ ಕಮಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸಿಪಿ ಮನೋಜ್ ಕೆ. ಮಾಹಿತಿ ನೀಡಿದರು. (ಏಜೆನ್ಸೀಸ್)