ನವದೆಹಲಿ: ಹರಿಯಾಣ ವಿಧಾನಸಭೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 5ಕ್ಕೆ ಮುಂದೂಡಿ ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಈ ಹಿಂದೆ ಅಕ್ಟೋಬರ್ 1 ರಂದು ಮತದಾನ ದಿನಾಂಕ ನಿಗದಿಯಾಗಿತ್ತು.
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್ ಏರ್ ರೈಫಲ್ನಲ್ಲಿ ರುಬಿನಾ ಫ್ರಾನ್ಸಿಸ್ಗೆ ಕಂಚು; ಭಾರತಕ್ಕೆ ಐದನೇ ಪದಕ!
ಅಸೋಜ್ ಅಮವಾಸ್ಯೆ ಹಬ್ಬವನ್ನು ಆಚರಿಸುವ ಬಿಷ್ಣೋಯ್ ಸಮುದಾಯದ ದೀರ್ಘಕಾಲದ ಸಂಪ್ರದಾಯವನ್ನು ಪರಿಗಣಿಸಿ ದಿನಾಂಕಗಳನ್ನು ಪರಿಷ್ಕರಿಸುವ ನಿರ್ಧಾರವನ್ನು ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಹರಿಯಾಣದ ವಿಧಾನಸಭಾ ಚುನಾವಣೆ ದಿನಾಂಕ ಬದಲಾವಣೆ ಮಾಡಿರುವ ಕಾರಣ ಜಮ್ಮು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಅಕ್ಟೋಬರ್ 4ರ ಬದಲಿಗೆ ಅಕ್ಟೋಬರ್ 8ಕ್ಕೆ ಬದಲಾಯಿಸಲಾಗಿದೆ. ಗುರು ಜಂಭೇಶ್ವರ ಸ್ಮರಣಾರ್ಥ 300ರಿಂದ 400 ವರ್ಷಗಳಿಂದ ಬಿಷ್ಣೋಯ್ ಸಮುದಾಯದವರು ಆಚರಿಸಿಕೊಂಡು ಬರುತ್ತಿದ್ದ ಹಬ್ಬ ಹಾಗೂ ಮತದಾನದ ಹಕ್ಕು ಗೌರವಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಯೋಗ ತಿಳಿಸಿದೆ.
ಮತದಾನದ ದಿನಾಂಕವನ್ನು ಮರು ನಿಗದಿಪಡಿಸುವಂತೆ ಅಖಿಲ ಭಾರತ ಬಿಷ್ಣೋಯ್ ಮಹಾಸಭಾದ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗವೊಂದು ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು.
ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣದ ಹಲವಾರು ಕುಟುಂಬಗಳು ತಮ್ಮ ಗುರು ಜಾಂಬೇಶ್ವರನ ಸ್ಮರಣಾರ್ಥ ಅಸೋಜ್ ಅಮವಾಸ್ಯೆ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಹರಿಯಾಣದ ಬಿಷ್ಣೋಯ್ ಸಮುದಾಯದ ಜನ ರಾಜಸ್ಥಾನಕ್ಕೆ ಸಾಮೂಹಿಕವಾಗಿ ತೆರಳಲಿದ್ದಾರೆ. ಅಕ್ಟೋಬರ್ 2ರಂದು ಹಬ್ಬ ಇರುವುದರಿಂದ ಸಿರ್ಸಾ, ಫತೇಹಾಬಾದ್ ಮತ್ತು ಹಿಸಾರ್‌ನಲ್ಲಿ ವಾಸಿಸುವ ಸಾವಿರಾರು ಬಿಷ್ಣೋಯಿ ಕುಟುಂಬಗಳು ಅಕ್ಟೋಬರ್ 1ರಂದು (ನಿಗದಿಪಡಿಸಿದ್ದ ಮತದಾನದ ದಿನ) ರಾಜಸ್ಥಾನಕ್ಕೆ ಪ್ರಯಾಣಿಸಲಿವೆ.
ಅಲ್ಲದೇ ಅದು ಶತಮಾನಗಳ ಸಂಪ್ರದಾಯ ಹಬ್ಬವಾಗಿರುವುದರಿಂದ ಅವರು ಮತದಾನವನ್ನೂ ನಿರಾಕರಿಸಲು ಮುಂದಾಗಿದ್ದಾರೆ. ಇದರಿಂದ ಮತದಾರರ ಭಾಗವಹಿಸುವಿಕೆಯನ್ನು ಕಡಿಮೆ ಮಾಡಬಹುದು. ಹಾಗಾಗಿ ಸಮುದಾಯಗಳ ಭಾವನೆ ಗೌರವಿಸುವ ಉದ್ದೇಶದಿಂದ ಚುನಾವಣಾ ಆಯೋಗ ಚುನಾವಣಾ ದಿನಾಂಕ ಬದಲಾವಣೆ ಮಾಡಿದೆ ಎಂದು ಆಯೋಗ ತಿಳಿಸಿದೆ.
ದೆಹಲಿ: ಚೀಲದಲ್ಲಿ 6 ದಿನದ ಹೆಣ್ಣು ಮಗುವಿನ ಮೃತದೇಹ ಪತ್ತೆ; ತಾಯಿ ಬಂಧನ