ಪ್ಯಾರಾಲಿಂಪಿಕ್ಸ್​ ಏರ್ ರೈಫಲ್​ನಲ್ಲಿ ರುಬಿನಾ ಫ್ರಾನ್ಸಿಸ್​ಗೆ ಕಂಚು; ಭಾರತಕ್ಕೆ ಐದನೇ ಪದಕ!

ok
Published on

ಪ್ಯಾರೀಸ್​: ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಮಹಿಳೆಯರ ಏರ್​ಪಿಸ್ತೂಲ್​ ಎಸ್​ಎಚ್1 10 ಮೀಟರ್​ ವಿಭಾಗದಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ ಶನಿವಾರ ಕಂಚಿನ ಪದಕ ಜಯಸಿದ್ದಾರೆ. ಆ ಮೂಲಕ ಶೂಟಿಂಗ್​ನಲ್ಲಿ ಭಾರತಕ್ಕೆ ಒಂದು ಚಿನ್ನ ಸೇರಿ ನಾಲ್ಕು ಪದಕಗಳು ಲಭಿಸಿದೆ.

ಅಂತಿಮ ಸುತ್ತಿನ ಆಯ್ಕೆಗೆ ನಡೆದ ಪಂದ್ಯದಲ್ಲಿ ರುಬಿನಾ ಅವರು 8 ಜನರಲ್ಲಿ ಏಳನೆಯವರಾಗಿದ್ದಾರೆ. ವಿಶ್ವ ದಾಖಲೆ ಹೊಂದಿರುವವರನ್ನೂ ಒಳಗೊಂಡ ಜಗತ್ತಿನ ಸರ್ವಶ್ರೇಷ್ಠ ಶೂಟರ್​ಗಳೊಂದಿಗೆ ನಿಕಟ ಪೈಪೋಟಿ ನೀಡಿದ 25 ವರ್ಷದ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಇರಾಕ್​ನ ಜವನ್​ಮರ್ಡಿ ಸರೆ ಅವರು ಸತತ ಮೂರನೇ ಒಲಿಂಪಿಕ್ಸ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಅವರು 236.8 ಅಂಕಗಳನ್ನು ಗಳಿಸಿದರು. ವಿಶ್ವ ದಾಖಲೆ ಹೊಂದಿರುವ ಟರ್ಕಿಯ ಆಯ್ಸೆಲ್ ಅವರು 231.1 ಅಂಕಳೊಂದಿಗೆ ಬೆಳ್ಳಿ ಪದಕ ಜಯಿಸಿದರು. ಮಧ್ಯಪ್ರದೇಶದ ಜಬಲ್​ಪುರದ ರುಬಿನಾ ಅವರು ಪ್ಯಾರಾಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ ಮೊದಲ ಪಿಸ್ತೂಲ್ ಶೂಟರ್​ ಎನಿಸಿಕೊಂಡಿದ್ದಾರೆ. ಶೂಟಿಂಗ್‌ನಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟಾರೆ ಐದನೇ ಪದಕವಾಗಿದೆ.

ಇದಕ್ಕೂ ಮೊದಲು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಎರಡನೇ ದಿನ, ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಈವೆಂಟ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರೆ, ಇದೇ ಈವೆಂಟ್​ನಲ್ಲಿ ಮತ್ತೊರ್ವ ಭಾರತೀಯ ಸ್ಪರ್ಧಿ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದಿದ್ದರು. ಆ ನಂತರ, ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದರು. ಉಳಿದಂತೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದುಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net