"ಆ ರಾತ್ರಿ ಎಲ್ಲವೂ..." ವಿಶ್ವಕಪ್​ ಗೆದ್ದ ಸಂಭ್ರಮದಲ್ಲಿ ನಾಯಕಿ ಹರ್ಮನ್​ಪ್ರೀತ್ ಕೌರ್​ ಹೇಳಿಕೆ ವೈರಲ್​ | Harmanpreet Kaur

"ಆ ರಾತ್ರಿ ಎಲ್ಲವೂ..."  ವಿಶ್ವಕಪ್​ ಗೆದ್ದ ಸಂಭ್ರಮದಲ್ಲಿ ನಾಯಕಿ ಹರ್ಮನ್​ಪ್ರೀತ್ ಕೌರ್​ ಹೇಳಿಕೆ ವೈರಲ್​ | Harmanpreet Kaur
Published on

Harmanpreet Kaur: ಹಲವು ವರ್ಷಗಳಿಂದ ಕಾಯುತ್ತಿದ್ದ ಮಹಾದಾಸೆ ಕಡೆಗೂ ನಿನ್ನೆ (ನ.02) ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಈಡೇರಿತು. ಬಹುನಿರೀಕ್ಷಿತ ಟ್ರೋಫಿಯಾಗಿದ್ದ ಏಕದಿನ ವಿಶ್ವಕಪ್ ಅನ್ನು ಭಾರತೀಯ ಮಹಿಳಾ ತಂಡ ಗೆದ್ದು ಬೀಗಿದ್ದು ಇದೀಗ ಇತಿಹಾಸ. ಹರಿಣರನ್ನು 52 ರನ್‌ಗಳಿಂದ ಮಣಿಸಿದ ಹರ್ಮನ್​ಪ್ರೀತ್ ಕೌರ್​ ಪಡೆಯ ಸಂಭ್ರಮ ಇದೀಗ ಮುಗಿಲು ಮುಟ್ಟಿದ್ದು, ತಂಡದ ನಾಯಕಿ ಹೇಳಿಕೆಗಳು ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚೊಚ್ಚಲ ಟ್ರೋಫಿ ಎತ್ತಿಹಿಡಿದ ಖುಷಿಯಲ್ಲಿ ತೇಲಾಡಿದ ಹರ್ಮನ್​ಪ್ರೀತ್ ಕೌರ್, "ಸೆಮಿಫೈನಲ್‌ನಲ್ಲಿ ಕಠಿಣ ಹೋರಾಟ ನಡೆಸಿದ ಬಳಿಕ ಇಂದು ನಾವು ಚಾಂಪಿಯನ್ಸ್​ ಆಗಿ ಹೊರಹೊಮ್ಮಿದ್ದೇವೆ. ತಂಡದ ಎಲ್ಲ ಆಟಗಾರ್ತಿಯರ ಶ್ರಮ ಈ ಗೆಲುವಿನಲ್ಲಿದೆ ಮತ್ತು ತಂಡದ ಬೆಂಬಲದಿಂದ ಮಾತ್ರ ಇದು ಸಾಧ್ಯವಾಯಿತು. ಅಂತಿಮ ಪಂದ್ಯದಲ್ಲಿ ದೀಪ್ತಿ ಶರ್ಮಾ ಮತ್ತು ಶೆಫಾಲಿ ವರ್ಮಾ ಅವರ ಸರ್ವತೋಮುಖ ಪ್ರದರ್ಶನವೇ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಯಿತು" ಎಂದರು.

"ಏಕದಿನ ವಿಶ್ವಕಪ್ ಗೆಲ್ಲುವುದು ನನಗೆ ದೊಡ್ಡ ಮಟ್ಟದ ಸಂತೋಷವನ್ನೇ ತಂದುಕೊಟ್ಟಿದೆ. ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ತಂಡದ ಆಡಳಿತ ಮಂಡಳಿ, ಬಿಸಿಸಿಐ ಮತ್ತು ಕ್ರಿಕೆಟ್​ ಪ್ರೇಮಿಗಳ ವರ್ಗಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಇದು ಕೇವಲ ಆರಂಭ ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲುವತ್ತ ನಮ್ಮ ಗುರಿ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆ ರಾತ್ರಿ ಎಲ್ಲವೂ....

"ಈ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದರೂ, ತಂಡದ ಆತ್ಮವಿಶ್ವಾಸ ಎಲ್ಲಿಯೂ ಕುಗ್ಗಲಿಲ್ಲ. ತಂಡದ ಪ್ರತಿಯೊಬ್ಬರೂ ತುಂಬಾ ಸಕಾರಾತ್ಮಕವಾಗಿಯೇ ಇದ್ದರು. ಪ್ರತಿಯೊಬ್ಬ ಆಟಗಾರರಿಗೂ ಕಪ್ ಗೆಲ್ಲಲು ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದ ಸೋಲು ನಮಗೆ ತುಂಬಾ ನೋವುಂಟು ಮಾಡಿತ್ತು. ಆ ರಾತ್ರಿ ಎಲ್ಲವೂ ಬದಲಾಯಿತು. ನಾವು ಗೆಲುವಿನ ಸಮೀಪ ಬಂದು ಪಂದ್ಯವನ್ನು ಸೋತಿದ್ದೇವೆ. ಹಿಂದೆಯೂ ಇದೇ ರೀತಿಯ ಅನುಭವಗಳನ್ನು ಅನುಭವಿಸಿದ್ದರೂ, ಈ ಬಾರಿ ಆದ ನೋವನ್ನು ನಮ್ಮಿಂದ ಸಹಿಸಲು ಸಾಧ್ಯವಾಗಲಿಲ್ಲ. ಸೋಲಿನ ಬಗ್ಗೆ ಯೋಚಿಸಬಾರದು ಮತ್ತು ಭವಿಷ್ಯದಲ್ಲಿ ನಾವೇನು ಮಾಡಬೇಕೆಂಬುದರ ಮೇಲೆ ಗಮನಹರಿಸಬೇಕು. ಒಮ್ಮೆ ಮಾಡಿದ ತಪ್ಪುಗಳನ್ನು ಮತ್ತೆ ರಿಪೀಟ್ ಮಾಡಬಾರದು ಎಂದು ಗಟ್ಟಿಯಾಗಿ ಮುಂದೆ ಸಾಗಿದೆವು. ಅದೇ ಇಂದು ನಮ್ಮ ಗೆಲುವಿಗೆ ಕಾರಣವಾಗಿದೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net