ಮಹಿಳಾ ಕ್ರಿಕೆಟರ್​ ಸ್ಮತಿ ಮಂದನಾ ಶತಕಕ್ಕಿಂತ ಮುಂಗುರುಳಿಗೆ ಫಿದಾ ಆದ್ರೂ ಫ್ಯಾನ್ಸ್!

smrithi web
Published on

ಕ್ಯಾರಾರಾ: ಭಾರತ ತಂಡದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮತಿ ಮಂದನಾ ಆತಿಥೇಯ ಆಸೀಸ್ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ಈ ಶತಕ ಸಾಧನೆಗಿಂತ ಹೆಚ್ಚಾಗಿ, ಶತಕ ಸಂಭ್ರಮಿಸುವ ವೇಳೆ ಅವರ ಮುಖದ ಮೇಲೆ ಬಿದ್ದಿದ್ದ ಮುಂಗುರುಳು ಹೆಚ್ಚು ಸದ್ದು ಮಾಡುತ್ತಿದೆ!

ಮುಂಬೈನ 25 ವರ್ಷದ ಆಟಗಾರ್ತಿ ಸ್ಮತಿ ಶತಕದ ಸಂಭ್ರಮದ ಚಿತ್ರವನ್ನು ಟ್ವೀಟಿಸಿರುವ ಸಹ-ಆಟಗಾರ್ತಿ ಹರ್ಲೀನ್ ಡಿಯೋಲ್, ‘ಅಲೆಕ್ಸಾ ಪ್ಲೀಸ್ ಪ್ಲೇ: ಓಹ್ ಹಸೀನಾ ಝುಲ್ಫೋ ವಾಲಿ!!!(ಓಹ್ ಗುಂಗುರು ಕೂದಲ ಸುಂದರಿಯೆ)’ ಎಂದು ಬರೆದಿದ್ದರು. ಜತೆಗೆ ಸ್ಮತಿ ಅವರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಮತಿ, ‘ಅಲೆಕ್ಸಾ ದಯವಿಟ್ಟು ಹರ್ಲೀನ್ ಡಿಯೋಲ್ ಬಾಯಿ ಮುಚ್ಚಿಸು (ಮ್ಯೂಟ್)’ ಎಂದು ತಮಾಷೆಯಾಗಿ ಟ್ವೀಟಿಸಿದ್ದರು.

ಇದರ ಬೆನ್ನಲ್ಲೇ ಇವರಿಬ್ಬರ ಈ ಸಂಭಾಷಣೆ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಕೂಡ ಸ್ಮತಿ ಅವರ ಮುಂಗುರುಳಿನ ಲುಕ್‌ಗೆ ಮೆಚ್ಚುಗೆ ಸೂಚಿಸಿ ವಿವಿಧ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಅನೇಕರು ಸ್ಮತಿ ಸಂಭ್ರಮಾಚರಣೆಯ ವಿಡಿಯೋಗೆ ಮೊಹಮದ್ ರಫಿ ಹಾಡಿರುವ ಈ ಜನಪ್ರಿಯ ಹಾಡನ್ನು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ.

ಯಾವ ಬಾಲಿವುಡ್ ಹೀರೋಯಿನ್‌ಗೂ ಕಡಿಮೆ ಇಲ್ಲದ ಸೌಂದರ್ಯ ಹೊಂದಿದ್ದಾರೆಂದು ಈ ಹಿಂದೆಯೂ ಹಲವು ಬಾರಿ ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದ್ದ ಸ್ಮತಿ ಮಂದನಾ, ಈಗಲೂ ಸಿಂಗಲ್ ಆಗಿರುವರೇ ಎಂದೂ ಅನೇಕರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸ್ಮತಿ ಶತಕ ಸಾಧನೆಯನ್ನು ಪ್ರಶಂಸಿಸುವ ಬದಲಾಗಿ ಅವರ ಸೌಂದರ್ಯದ ಬಗ್ಗೆಯೇ ಹೆಚ್ಚಿನವರು ಚರ್ಚಿಸುತ್ತಿರುವ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net