ನತಾಶಾ ಜತೆ ಡಿವೋರ್ಸ್​ ವದಂತಿ ನಡುವೆಯೇ ಹಾರ್ದಿಕ್​ ಬಗ್ಗೆ ರಷ್ಯಾ ಮಾಡೆಲ್ ಮಾಡಿದ​ ಕಾಮೆಂಟ್​ ವೈರಲ್​!

Hardik Pandya
Published on

ನವದೆಹಲಿ: ಟಿ20 ವಿಶ್ವಕಪ್​ ಹೀರೋ ಹಾರ್ದಿಕ್ ಪಾಂಡ್ಯ ಈಗ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಈ ಮೆಗಾಟೂರ್ನಿಯಿಂದ ಅವರ ಮೇಲಿನ ನೆಗೆಟಿವಿಟಿ ಎಲ್ಲ ಮಾಯವಾಗಿದೆ. ಎಲ್ಲೆಡೆ ಫುಲ್ ಪಾಸಿಟಿವಿಟಿ ಬಂದಿದೆ. ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ತಮ್ಮ ಅಮೋಘ ಪ್ರದರ್ಶನದೊಂದಿಗೆ ಹಾರ್ದಿಕ್​ ಸೂಪರ್ ಸ್ಟಾರ್ ಆದರು. ಪಾಂಡ್ಯಗೆ ಮೊದಲಿನಿಂದಲೂ ಕ್ರೇಜ್ ಇದೆ. ಕಳೆದ ಕೆಲವು ವರ್ಷಗಳಿಂದ ಭಾರತ ತಂಡದ ಗೆಲುವಿನಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುವ ಮೂಲಕ ಉತ್ತಮ ಜನಪ್ರಿಯತೆಯನ್ನು ಗಳಿಸಿದ್ದಾರೆ.

ಭಾರಿ ಜನಪ್ರಿಯತೆ ನಡುವೆಯೂ ಐಪಿಎಲ್​ ಸಮಯದಲ್ಲಿ ಹಾರ್ದಿಕ್​ ಅವರು ಭಾರಿ ಟೀಕೆ ಮತ್ತು ಟ್ರೋಲಿಂಗ್‌ಗೆ ಒಳಗಾಗಿದ್ದರು. ಆದ್ದರಿಂದ ಅಭಿಮಾನಿಗಳಲ್ಲಿ ಹಾರ್ದಿಕ್​ ವಿರುದ್ಧ ಬೇಸರವೂ ವ್ಯಕ್ತವಾಗಿತ್ತು. ಆದರೆ, ಟಿ20 ವಿಶ್ವಕಪ್​ನಲ್ಲಿ ಬ್ಯಾಟ್ ಹಾಗೂ ಚೆಂಡಿನ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ ಪಾಂಡ್ಯ, ಅಂತಿಮ ಹೋರಾಟದಲ್ಲಿ ಆಫ್ರಿಕಾ ತಂಡದ ಡೇಂಜರಸ್​ ಬ್ಯಾಟ್ಸ್​ಮನ್​ಗಳಾದ ಕ್ಲಾಸೆನ್ ಹಾಗೂ ಮಿಲ್ಲರ್ ಅವರನ್ನು ಔಟ್ ಮಾಡಿ ಪಂದ್ಯವನ್ನು ಟೀಮ್​ ಇಂಡಿಯಾದತ್ತ ತಿರುಗಿಸಿದರು. ಇದರಿಂದ ಹಾರ್ದಿಕ್ ಕ್ರೇಜ್ ಇಮ್ಮಡಿಗೊಂಡಿತು. ಇದೀಗ ಎಲ್ಲರೂ ಹಾರ್ದಿಕ್​ ಅವರನ್ನು ಹೊಗಳುತ್ತಿದ್ದಾರೆ.

ಭಾರತ ತಂಡ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಾರ್ದಿಕ್​ಗೆ ಎಲ್ಲ ವರ್ಗದ ಸೆಲೆಬ್ರಿಟಿಗಳಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರ ನಡುವೆ ರಷ್ಯಾದ ಮಾಡೆಲ್ ಮತ್ತು ನಟಿ ಅವರನ್ನು ಅಭಿನಂದಿಸಿದ್ದಾರೆ. ನಮಗೆ ಹೆಮ್ಮೆ ತಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆ ಮಾಡೆಲ್​ ಹೆಸರು ಎಲೆನಾ ಟುತೇಜಾ. ಟೀಮ್​ ಇಂಡಿಯಾದ ಗೆಲುವಿನ ಬಗ್ಗೆ ಎಲ್ಲ ಭಾರತೀಯರು ತುಂಬಾ ಹೆಮ್ಮೆಪಡುತ್ತಾರೆ ಎಂದು ಆಕೆ ಹೇಳಿದ್ದಾರೆ. ಹಾರ್ದಿಕ್ ಜೊತೆ ಉತ್ತಮ ಬಾಂಧವ್ಯವಿದೆ. ನಾವಿಬ್ಬರು ಜಾಹೀರಾತು ಒಂದರಲ್ಲಿ ಒಟ್ಟಿಗೆ ನಟಿಸಿದ್ದೆವು ಎಂದು ಹೇಳಿ ಫೋಟೋ ಶೇರ್ ಮಾಡಿದ್ದಾರೆ. ಭಾರತ ತಂಡದ ಜೊತೆಗೆ ಪಾಂಡ್ಯ ಕೂಡ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಎಲೆನಾ ಅವರ ಇನ್‌ಸ್ಟಾ ಪೋಸ್ಟ್ ಈಗ ವೈರಲ್ ಆಗಿದೆ.

ಎಲೆನಾ ಅವರ ಪೋಸ್ಟ್ ನೋಡಿದ ಕೆಲವು ನೆಟ್ಟಿಗರು ಹಾರ್ದಿಕ್​ ಅವರೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಪಾಂಡ್ಯ ಬಗ್ಗೆ ವಿಶೇಷ ಪೋಸ್ಟ್ ಹಾಕಿದಾಗ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ವೇಳೆ ವಿಶ್ವಕಪ್ ಟ್ರೋಫಿಯೊಂದಿಗೆ ಮನೆಗೆ ಬಂದ ಹಾರ್ದಿಕ್, ಪುತ್ರ ಅಗಸ್ತ್ಯ ಜೊತೆಗೂಡಿ ವಿಜಯೋತ್ಸವ ಆಚರಿಸಿದರು. ಮಗನನ್ನು ಮುಟ್ಟಿ ಭಾವುಕರಾದರು. ಆದರೆ ಈ ಸಂಭ್ರಮಾಚರಣೆಯಲ್ಲಿ ಪಾಂಡ್ಯ ಪತ್ನಿ ನತಾಶಾ ಇಲ್ಲದಿರುವುದು ಚರ್ಚೆಗೆ ಕಾರಣವಾಗಿತ್ತು. ಇವರಿಬ್ಬರೂ ಬೇರ್ಪಟ್ಟಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಾರೆ ನೆಟ್ಟಿಗರು.

ಇದೇ ಸಮಯದಲ್ಲಿ, ಮಾಡೆಲ್ ಎಲೆನಾ ಅವರು ಹಾರ್ದಿಕ್ ಜೊತೆಗಿನ ಜಾಹೀರಾತು ಚಿತ್ರೀಕರಣದ ಫೋಟೋವನ್ನು ಪೋಸ್ಟ್ ಮಾಡಿದಾಗ, ಇಬ್ಬರು ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ತೀವ್ರ ವೇಗವನ್ನು ಪಡೆದುಕೊಂಡಿವೆ. ಆದರೆ, ಸದ್ಯಕ್ಕೆ ಇದು ವದಂತಿ ಎಂಬುದು ತಿಳಿದುಬಂದಿದೆ. ವೃತ್ತಿ ಬದುಕಿನಲ್ಲಿ ಅದ್ಧೂರಿ ಯಶಸ್ಸಿನ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಹಾರ್ದಿಕ್ ತಮ್ಮ ವೈಯಕ್ತಿಕ ಬದುಕಿನಿಂದಾಗಿ ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net