ಅಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶವಕಪ್ ಸೂಪರ್ 08 ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರೆಸಿದ್ದು, ಸೆಮಿಫಯನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಬಾಂಗ್ಲದೇಶ ವಿರುದ್ಧದ ಪಂದ್ಯದಲ್ಲಿ 50 ರನ್ಗಳ ಭರ್ಜರಿ ಜಯ ಸಾಧಿಸಿದರ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ರೋಹಿತ್ ಶರ್ಮಾ ಸಹ ಆಟಗಾರ ಹಾರ್ದಿಕ್ ಪಾಂಡ್ಯರನ್ನು ಹಾಡಿ ಹೊಗಳಿದ್ದಾರೆ.
17ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿನ ನಾಯಕತ್ವ ಬಿಕ್ಕಟ್ಟಿನ ವಿಚಾರವಾಗಿ ಈ ಇಬ್ಬರು ಆಟಗಾರರ ನಡುವೆ ಬಿರುಕು ಉಂಟಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದ್ದವು. ಆದರೆ, ಅದನ್ನು ಮರೆತಂತೆ ಕಾಣುತ್ತಿರುವ ರೋಹಿತ್ ಹಾರ್ದಿಕ್ ಪಾಂಡ್ಯರನ್ನು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ್ದಾರೆ.
ನಾವು ಇಂದಿನ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಆಡಿದ್ದೇವೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಒಂದು ಯೋಜನೆಯನ್ನು ಪರಿಸ್ಥಿತಿಗೆ ತಕ್ಕಂತೆ ಕಾರ್ಯರೂಪಕ್ಕೆ ತರುವುದು ಮುಖ್ಯವಾಗುತ್ತದೆ. ಹೀಗಾಗಿ ನಮ್ಮ ತಂಡದ ಪ್ರದರ್ಶನ ತೃಪ್ತಿ ನೀಡಿದೆ. ನನ್ನ ಪ್ರಕಾರ, ಟಿ20 ಕ್ರಿಕೆಟ್ನಲ್ಲಿ ಎಲ್ಲಾ ಬ್ಯಾಟರ್ಗಳು ಅರ್ಧಶತಕ ಗಳಿಸಬೇಕೆಂದಿಲ್ಲ. ಒಬ್ಬ ಬ್ಯಾಟರ್ ಅರ್ಧಶತಕ ಬಾರಿಸಿದರೂ ನಾವು 196 ರನ್ಗಳಿಸಿದ್ದೇವೆ. ಹೀಗಾಗಿ ಇದೇ ಮಾದರಿಯಲ್ಲಿ ನಮ್ಮ ಆಟ ಮುಂದುವರೆಯಬೇಕೆಂದು ನಾನು ಬಯಸುತ್ತೇನೆ.
ನಮ್ಮ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಟಾಪ್- 5, 6 ಬ್ಯಾಟರ್ಗಳ ಬಳಿಕ ಹಾರ್ದಿಕ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವುದರಿಂದ ಅಂತಿಮ ಓವರ್ಗಳಲ್ಲಿ ದೊಡ್ಡ ಸ್ಕೋರ್ ಗಳಿಸುತ್ತಿದ್ದೇವೆ. ಹಾರ್ದಿಕ್ ಅವರ ಸಾಮರ್ಥ್ಯ ಏನೆಂದು ನಮಗೆ ತಿಳಿದಿದೆ. ಅವರು ನಮಗೆ ಬಹಳ ಮುಖ್ಯವಾದ ಆಟಗಾರ. ಪಾಂಡ್ಯ ಇದೇ ಆಲ್ರೌಂಡರ್ ಆಟವನ್ನು ಮುಂದುವರಿಸಿದರೆ, ನಾವು ಮುಂದಿನ ಹಂತಕ್ಕೇರುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ಬೌಲರ್ಗಳು ಸಹ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಇದೇ ರೀತಿ ನಮ್ಮ ಪ್ರದರ್ಶನ ಮುಂದುವರೆದರೆ ಮುಂದಿನ ಹಂತಕ್ಕೇರಲು ನಮಗೆ ಸುಲಭವಾಗುತ್ತದೆ. ಹೀಗಾಗಿ ನಮ್ಮ ಆಟಗಾರರಿಂದ ನಾನು ಇಂತಹ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.