

ಬದಿಯಡ್ಕ: ವಿದ್ಯಾರ್ಥಿಗಳು ಸ್ಥಿರತೆ ಕಾಯ್ದುಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ಮಾನಸಿಕವಾಗಿಯೂ ಶಾರೀರಿಕವಾಗಿಯೂ ನಾವು ಸದೃಢರಾಗಿರಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವನ್ನು ಮುಂದಿಟ್ಟುಕೊಂಡು ಪಾಲ್ಗೊಳ್ಳುವುದಕ್ಕಿಂತ ಪೂರ್ಣ ಪ್ರಯತ್ನದಿಂದ ಮುಂದುವರಿಯಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆ ಯುವ ಸಾಧಕಿ ಮಧುಶ್ರೀ ಮಿತ್ರ ಪೆರ್ಲ ಹೇಳಿದರು.
ಶ್ರೀ ರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿ, ಯುವ ವಿಭಾಗದ ನೇತೃತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಜರುಗಿದ ಪ್ರತಿಭಾ ಪ್ರದರ್ಶನ-ಕ್ರೀಡೋತ್ಸವದಲ್ಲಿ ಮಾತನಾಡಿದರು.
ನಿವೃತ್ತ ದೈಹಿಕ ಶಿಕ್ಷಕ ನಾರಾಯಣ ಭಟ್ ಆನೆಪ್ಪಳ್ಳ ಧ್ವಜಾರೋಹಣಗೈದು ಉದ್ಘಾಟಿಸಿದರು. ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಹವ್ಯಕ ಮಹಾಮಂಡಲ ಯುವವಿಭಾಗ ಪ್ರಧಾನ ಕೇಶವ ಪ್ರಕಾಶ ಮುಣ್ಚಿಕ್ಕಾನ, ಮಹಾಮಂಡಲ ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಶಿಷ್ಯಮಾಧ್ಯಮ ವಿಭಾಗದ ಗೋವಿಂದ ಭಟ್ ಬಳ್ಳಮೂಲೆ, ಮಂಡಲ ಉಪಾಧ್ಯಕ್ಷ ನಾರಾಯಣ ಮೂರ್ತಿ ಕೊಡಗು, ಮುಳ್ಳೇರಿಯ ಮಂಡಲ ವಿಷ್ಣು ಗುಪ್ತ ವಿಶ್ವವಿದ್ಯಾಪೀಠದ ಸಂಚಾಲಕ ಜಯದೇವ ಖಂಡಿಗೆ, ಡಾ.ವೈ.ವಿ.ಕೃಷ್ಣಮೂರ್ತಿ, ಕುಸುಮಾ ಪೆರ್ಮುಖ, ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ ಪಾಲ್ಗೊಂಡಿದ್ದರು.
ಯುವತಿ ವಿಭಾಗದ ಸೌಂದರ್ಯ ಕೊಲ್ಲಂಪಾರೆ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿವಾಹಿನಿ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ ಸ್ವಾಗತಿಸಿ, ಯುವವಿಭಾಗ ಪ್ರಧಾನ ಡಾ.ಶ್ರೀಶಕುಮಾರ ಪಂಜಿತ್ತಡ್ಕ ವಂದಿಸಿದರು. ವಿವಿಧ ವಲಯಗಳ ಸ್ಪರ್ಧೆಗಳು ಹಾಗೂ ಪದಾಧಿಕಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.