

MI vs RR: ನಿನ್ನೆ (ಮೇ.01) ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 100 ರನ್ಗಳ ಭರ್ಜರಿ ಜಯ ಸಾಧಿಸಿತು.
ಕೇವಲ 16.1 ಓವರ್ನೊಳಗೆ ಆಲ್ಔಟ್ ಆದ ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ರಿಂದ ಅಮೋಘ ಇನ್ನಿಂಗ್ಸ್ ಕಾಣಲು ಸಾಧ್ಯವಾಗಲಿಲ್ಲ. ಇವರೊಂದಿಗೆ ಮಧ್ಯಮ ಕ್ರಮಾಂಕ ಬ್ಯಾಟರ್ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ ಕಾರಣ, ಆರ್ಆರ್ ಬಹುಬೇಗನೇ ಪಂದ್ಯವನ್ನು ಮುಂಬೈಗೆ ಬಿಟ್ಟುಕೊಟ್ಟಿತು. ಐಪಿಎಲ್ ಇತಿಹಾಸದಲ್ಲಿ 100 ರನ್ಗಳ ಗೆಲುವು ದಾಖಲಿಸಿದ ತಂಡ ಎಂಬ ಪಟ್ಟಿಗೆ ಸೇರಿದ ಮುಂಬೈ ಇಂಡಿಯನ್ಸ್, ಈ ಬಾರಿಯ ಆವೃತ್ತಿಯಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.
ಆರಂಭದಲ್ಲಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದ್ದ ಹಾರ್ದಿಕ್ ಪಡೆ ಇದೀಗ ಕಳೆದ ಏಳು ಪಂದ್ಯಗಳಿಂದ ಸತತ ಗೆಲುವು ಸಾಧಿಸುತ್ತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 217 ರನ್ಗಳ ಬೃಹತ್ ಗುರಿಯನ್ನು ನೀಡಿ, ಬರೋಬ್ಬರಿ 100 ರನ್ನಿಂದ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್ಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಖುಷಿಯ ಭರದಲ್ಲಿ ಮತ್ತೊಂದು ವಿವಾದಕ್ಕೆ ಗುರಿಯಾಗುವಂತ ಹೇಳಿಕೆ ನೀಡಿದ್ದಾರೆ.
"ಮುಂಬೈ ಇಂಡಿಯನ್ಸ್ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲು ಅರ್ಹ ತಂಡ. ಅಕಸ್ಮಾತ್ ಮುಂಬೈ ಏನಾದರೂ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲದಿದ್ದರೆ, ಇತರ ಫ್ರಾಂಚೈಸಿಗಳು ಸಹ ಟ್ರೋಫಿ ಎತ್ತುವ ಅರ್ಹತೆ ಕಳೆದುಕೊಳ್ಳುತ್ತದೆ. ಜಸ್ಪ್ರೀತ್ ಬುಮ್ರಾ ಸಖತ್ ಕಮ್ಬ್ಯಾಕ್ ಮಾಡಿದ್ದಾರೆ. ಬುಮ್ರಾ ಜತೆಗೆ ಟ್ರೆಂಟ್ ಬೌಲ್ಟ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ಹಾರ್ದಿಕ್, ಕರಣ್ ಮತ್ತು ಕಾರ್ಬಿನ್ ಬಾಷ್ ತಂಡದಲ್ಲಿ ಉತ್ತಮ ಬೌಲಿಂಗ್ ಆಯ್ಕೆಯಾಗಿದ್ದಾರೆ. ಕಪ್ ಗೆಲ್ಲುವ ಒಂದು ಅತ್ಯುತ್ತಮ ತಂಡವನ್ನೇ ಮುಂಬೈ ಹೊಂದಿದೆ. ಆರನೇ ಬಾರಿಗೆ ಎಂಐ ಟ್ರೋಫಿ ಎತ್ತುವುದು ಖಚಿತ" ಎಂದು ಬಜ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).