ಪ್ರಯೋಗಗಳ ಮೂಲಕ ಕಲಿಕೆ ಪರಿಣಾಮಕಾರಿ : ಸುರೇಶ್ ಶೆಟ್ಟಿ ನಡಿಯಾಲ್‌ಗುತ್ತು ಸಲಹೆ

New Project (24)
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ವಿಜ್ಞಾನ ಅಧ್ಯಯನದಲ್ಲಿ ಪ್ರಯೋಗಶೀಲತೆ ಅತ್ಯಂತ ಪ್ರಮುಖ ಅಂಶವಾಗಿದ್ದು, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಾಗದೆ ಸ್ವತಃ ಪ್ರಯೋಗಗಳ ಮೂಲಕ ಕಲಿಯಬೇಕು. ಕ್ರೀಡಾ ಸಾಮಗ್ರಿಗಳ ವಿತರಣೆ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಶ್ರೀ ಮಹಾಮಾಯಿ ದೇವಸ್ಥಾನ, ಶ್ರೀ ಕೋರ್ದಬ್ಬು ದೈವಸ್ಥಾನ ಎಳತ್ತೂರು ಆಡಳಿತ ಮಂಡಳಿ ಅಧ್ಯಕ್ಷ ಸುರೇಶ್ ಶೆಟ್ಟಿ ನಡಿಯಾಲ್‌ಗುತ್ತು ತಿಳಿಸಿದರು.

ಎಳತ್ತೂರಿನ ನಡಿಯಾಲು ಗುತ್ತಿನ ದಿ.ರತಿ ಶೆಟ್ಟಿ ಅವರ 25ನೇ ವರ್ಷದ ಸಂಸ್ಮರಣೆಯ ಅಂಗವಾಗಿ, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ಗೆ ವಿಜ್ಞಾನ ಪ್ರಯೋಗಾಲಯ ಪರಿಕರ ಹಾಗೂ ಕ್ರೀಡಾ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಪರಿಕರ ಹಸ್ತಾಂತರಿಸಿ ಮಾತನಾಡಿದರು.

ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿ ಕೆ.ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿ, ಕ್ರೀಡೆಗಳು ತಂಡ ಭಾವನೆ, ಶಿಸ್ತು ಹಾಗೂ ಆರೋಗ್ಯವನ್ನು ಬಲಪಡಿಸುತ್ತವೆ. ಇವುಗಳೊಂದಿಗೆ ವಿಜ್ಞಾನ ಪರಿಕರಗಳು ಅಧ್ಯಯನವನ್ನು ಹೆಚ್ಚು ಆಕರ್ಷಕ ಹಾಗೂ ಅನುಭವಾತ್ಮಕವಾಗಿಸುತ್ತವೆ ಎಂದರು.

ದಾನಿಗಳಾದ ಶಾಲಾ ಹಳೇ ವಿದ್ಯಾರ್ಥಿ ಮುಂಬೈ ಉದ್ಯಮಿ ಶಶಿಧರ ಶೆಟ್ಟಿ ನಡಿಯಾಲ್‌ಗುತ್ತು, ಹೇಮಲತಾ ಶಶಿಧರ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುಮನಾ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ವಂದಿಸಿದರು. ಸಹಶಿಕ್ಷಕಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net