

ಬೆಳ್ತಂಗಡಿ: ಬೈಂದೂರಿನ ಪಡುವರಿ ಗ್ರಾಮದಲ್ಲಿರುವ ಹೇನಬೇರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 5 ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಮುಚ್ಚಿದ್ದು, ಈ ಶಾಲೆಯನ್ನು ಬೆನ್ನುಹುರಿ ಅಪಘಾತಕ್ಕೊಳಗಾದ ಅಂಗವಿಕಲರ ಒತ್ತಡ, ಗಾಯ ನಿರ್ವಹಣೆ ಮತ್ತು ಪುನಶ್ಚೇತನ ಕೇಂದ್ರವನ್ನಾಗಿ ಮಾಡುವ ಸಲುವಾಗಿ ಶಿಕ್ಷಣ ಇಲಾಖೆ ಮತ್ತು ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ನಡುವೆ ಒಡಂಬಡಿಕೆ ವಿನಿಮಯ ಇತ್ತೀಚೆಗೆ ನಡೆಯಿತು.
ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾ ಸೇತು ಯೋಜನೆಯಡಿಯಲ್ಲಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ, ಬಿಇಒ ಕಛೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಮತ್ತು ಸೇವಾಧಾಮ ಸಂಸ್ಥಾಪಕ ಕೆ.ವಿನಾಯಕ ರಾವ್ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.
ಸಮೃದ್ಧ ಜನ ಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಶೆಟ್ಟಿ, ಉದ್ಯಮಿ ಪಾಂಡುರಂಗ ಪಡಿಯಾರ್, ಸಾಮಾಜಿಕ ಕಾರ್ಯಕರ್ತ ದಿನಕರ್, ಕರ್ನಾಟಕ ಪ್ರಾಥಮಿಕ ಶಿಕ್ಷಕ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ್ ಪೂಜಾರಿ, ಸೇವಾಭಾರತಿಯ ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ. ಉಪಸ್ಥಿತರಿದ್ದರು.
ಮುಂದಿನ ತಿಂಗಳುಗಳಲ್ಲಿ ಈ ಯೋಜನೆ ಆರಂಭವಾಗಲಿದ್ದು, ಸುತ್ತಮುತ್ತಲ ಜಿಲ್ಲೆಯಲ್ಲಿ ಒತ್ತಡ ಗಾಯಗಳಿರುವಂತಹ ಬೆನ್ನುಹುರಿ ಅಪಘಾತಕ್ಕೊಳಗಾದ ಅಂಗವಿಕಲರಿಗೆ ಇಲ್ಲಿ ಪುನಶ್ಚೇತನ ನೀಡಲಾಗುತ್ತದೆ. ಸೇವಾಭಾರತಿ ಕನ್ಯಾಡಿ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 700ಕ್ಕೂ ಹೆಚ್ಚು ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಪುನಶ್ಚೇತನವನ್ನು ನೀಡಿದೆ.