

ಮಂಗಳೂರು : ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಉಪ ಚುನಾವಣೆೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಜಯಭೇರಿ ಬಾರಿಸಿದೆ. ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು 3,655 ಪ್ರಥಮ ಪ್ರಾಶಸ್ತ್ಯದ ಮತ ಗಳಿಸಿ ನಿರಾಯಾಸದ ಗೆಲುವು ದಾಖಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಗೆ 1,958 ಮತಗಳಿಗೆ ತೃಪ್ತಿ ಪಡಬೇಕಾಯಿತು. ಎಸ್‌ಡಿಪಿಐನ ಅನ್ವರ್ ಸಾದತ್ ಬಜತ್ತೂರು 195 ಹಾಗೂ ಪಕ್ಷೇತರ ಅಭ್ಯರ್ಥಿ ದಿನಕರ್ ಉಳ್ಳಾಲ್ 9 ಮತ ಪಡೆದರು. 90 ಮತಗಳು ಅಸಿಂಧುವಾಗಿದೆ. ಬಿಜೆಪಿಯ ಕಿಶೋರ್ ಕುಮಾರ್ ಅವರು 1,697 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಪರಾಭವಗೊಳಿಸಿದರು.
ದ.ಕ.ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯ ದ.ಕ.ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದ್ವಿಸದಸ್ಯ ಕ್ಷೇತ್ರವಾಗಿದ್ದು, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ತೆರವಾದ ಒಂದು ಸ್ಥಾನಕ್ಕೆ ಅ.21ರಂದು ಚುನಾವಣೆ ನಡೆದಿತ್ತು. ಒಟ್ಟು 6,032 ಮತಗಳ ಪೈಕಿ 5,907 ಮತ ಚಲಾವಣೆಯಾಗಿತ್ತು. ಈ ಪೈಕಿ 90 ಮತಗಳು ಅಸಿಂಧುವಾದ ಕಾರಣ ಜಯ ಗಳಿಸಲು 2,909 ಪ್ರಥಮ ಪ್ರಾಶಸ್ತ್ಯದ ಮತ ನಿಗದಿಯಾಗಿತ್ತು.
* ಮತ ಎಣಿಕೆ ಸುಸೂತ್ರ
ಮಂಗಳೂರಿನ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತ ಎಣಿಕೆ ನಡೆಯಿತು. ಬೆಳಗ್ಗೆ 8ಕ್ಕೆ ಸ್ಟ್ರಾಂಗ್ ರೂಮ್ ತೆರೆದು 392 ಮತ ಪೆಟ್ಟಿಗೆಗಳನ್ನು ಎಣಿಕಾ ಕೇಂದ್ರಕ್ಕೆ ತರಲಾಯಿತು. ಮತ ಪತ್ರಗಳನ್ನು ಖಾಲಿ ಡ್ರಮ್‌ಗೆ ಹಾಕಿ ಮಿಶ್ರಣ ಮಾಡಿದ ಬಳಿಕ ತಲಾ 25 ಮತಪತ್ರಗಳ ಬಂಡಲ್ ಮಾಡಿ 12 ಟೇಬಲ್ಗಳಲ್ಲಿ ಮತ ಎಣಿಕೆ ಸಿಬ್ಬಂದಿಗೆ ನೀಡಲಾಯಿತು. ಮಧ್ಯಾಹ್ನ 12ಕ್ಕೆ ಮತ ಎಣಿಕೆ ಪೂರ್ಣಗೊಂಡು ವಿಜೇತರನ್ನು ಘೋಷಿಸಲಾಯಿತು.
ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ದ.ಕ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ.ಕೆ., ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು. ಮತ ಎಣಿಕೆ ಕೇಂದ್ರ ಒಳಗೆ ಹಾಗೂ ಹೊರಗಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಎಂಎಲ್‌ಸಿ ಪ್ರತಾಪ್‌ಸಿಂಹ ನಾಯಕ್, ಮಾಜಿ ಸಚಿವ ಕೃಷ್ಣ.ಜೆ.ಪಾಲೆಮಾರ್, ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ರೈ ಬೋಳಿಯಾರ್ ಮುಂತಾದವರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ವಿಜೇತ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಅಭಿನಂದಿಸಿದರು.
*ಉಪ ಚುನಾವಣೆಯ ಫಲಿತಾಂಶ
ಕಿಶೋರ್ ಕುಮಾರ್ (ಬಿಜೆಪಿ)-3655
ರಾಜು ಪೂಜಾರಿ (ಕಾಂಗ್ರೆಸ್)-1958
ಅನ್ವರ್ ಸಾದತ್ (ಎಸ್‌ಡಿಪಿಐ)-195
ದಿನಕರ ಉಳ್ಳಾಲ (ಪಕ್ಷೇತರ)-9
ಅಸಿಂಧು ಮತ -90
ಒಟ್ಟು ಮತ -5,907
*ಗೆಲುವಿನ ಅಂತರ -1,697