ಕಲಾವಿದರಿಗೆ ನೆರವು ಹಸ್ತಾಂತರ ಅಭಿನಂದನಾರ್ಹ

kota-1
Published on

ಕೋಟ: ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್ ಸಮಾಜಸೇವೆಯ ಕಾರ್ಯವೈಖರಿ ವಿಶಿಷ್ಟವಾದದು. ತೆರೆಯ ಮರೆಯಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ ನೀಡುವುದಲ್ಲದೆ ಕಲಾವಿದರಿಗೆ ನೀಡುತ್ತಿರುವ ನೆರವು ಅಭಿನಂದನಾರ್ಹ ಕಾರ್ಯವಾಗಿದೆ ಎಂದು ಪಟ್ಲ ಫೌಂಡೇಶನ್ ಪ್ರವರ್ತಕ ಸತೀಶ್ ಶೆಟ್ಟಿ ಪಟ್ಲ ಅಭಿಪ್ರಾಯಪಟ್ಟರು.

ಮಂಗಳವಾರ ಪಾರಂಪಳ್ಳಿ ಪಡುಕರೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ವತಿಯಿಂದ ಇಲ್ಲಿನ ಪ್ರಗತಿಪರ ಕೃಷಿಕ ರವೀಂದ್ರ ಐತಾಳರ ಮನೆ ವಠಾರದಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಣಾಧಿಕಾರಿ ಶಿವಾನಂದ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಐತಾಳ್ ಅವರು ಜೀರ್ಣೋದ್ಧಾರಗೊಳ್ಳುತ್ತಿರುವ ಪಾರಂಪಳ್ಳಿ ಶನೀಶ್ವರ ದೇಗುಲಕ್ಕೆ ಒಂದು ಲಕ್ಷ ರೂ.ಹಾಗೂ ಮಾಣಿ ಚೆನ್ನಕೇಶವ ದೇಗುಲ, ಹಂದೆ ಮಹಾವಿಷ್ಣು ಮಹಾಗಣಪತಿ ದೇಗುಲ, ಶಾಂಭವೀ ಶಾಲೆ ಗಿಳಿಯಾರು, ಖಾಸಗಿ ಪ್ರಾಥಮಿಕ ಶಾಲೆ ಪಾರಂಪಳ್ಳಿ, ಕವಳೆ ಕಟ್ಟೆ ಬಂಟ್ವಾಳ ಶಾಲೆ ಬಸ್, ಕೃಷಿಕ ಜಯರಾಮ ಕದ್ರಿಕಟ್ಟು, ವಿದ್ಯಾರ್ಥಿಗಳಾದ ಪ್ರಜ್ವಲ್ ತಿಂಗಳಾಯ, ಸಿಂಚನಾ ಅವರಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಕೃಷಿ ಕಾರ್ಮಿಕ ಪದ್ದು ಮರಕಾಲ್ತಿ, ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ, ಪಾವಂಜೆ ಮೇಳ ಕಲಾವಿದ ಮೋಹನ್ ಬೆಳ್ಪಾಡಿ, ಪಟ್ಲ ಸತೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಣಾಧಿಕಾರಿ ಶಿವಾನಂದ ಮಯ್ಯ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ಪಾರಂಪಳ್ಳಿ, ಸಾಲಿಗ್ರಾಮ ಪ.ಪಂ.ಸದಸ್ಯ ರಾಜು ಪೂಜಾರಿ ಕಾರ್ಕಡ ಉಪಸ್ಥಿತರಿದ್ದರು.

ಸಮಾಜಸೇವಕ ರವೀಂದ್ರ ಐತಾಳ್ ಪಾರಂಪಳ್ಳಿ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ಕೆ.ರಾಜಾರಾಮ ಐತಾಳ್ ನಿರೂಪಿಸಿ, ವಂದಿಸಿದರು. ಪಾವಂಜೆ ಮೇಳ ವತಿಯಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net