ಹಂಪಿ ಉತ್ಸವ ವಿರೂಪಾಕ್ಷೇಶ್ವರ ಆಶೀರ್ವಾದದಿಂದ ಯಶಸ್ಸು

Hampi Utsav Samaropa
ಹಂಪಿ ಉತ್ಸವ ಅಂಗವಾಗಿ ಭಾನುವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿ ರಮ್ಯಾ ಕಾಣಿಸಿಕೊಂಡರು. ಶಾಸಕ ಎಚ್.ಆರ್.ಗವಿಯಪ್ಪ, ಹುಡಾ ಅಧ್ಯಕ್ಷ ಇಮಾಮ್ ನಿಯಜಿ, ಡಿಸಿ ಎಂ.ಎಸ್.ದಿವಾಕರ, ಎಸ್ಪಿ ಶ್ರೀಹರಿಬಾಬು, ಎಡಿಸಿ ಬಾಲಕೃಷ್ಣಪ್ಪ ಇದ್ದರು.
Published on

ಶಾಸಕ ಗವಿಯಪ್ಪ ಹೇಳಿಕೆ >> ಜನಜಂಗುಳಿಯಲ್ಲಿ ಮಿಂದೆದ್ದ ಹಂಪಿ

ವಿ.ಕೆ.ರವೀಂದ್ರ ಹಂಪಿ (ಎಂ.ಪಿ.ಪ್ರಕಾಶ ವೇದಿಕೆ)

ಮೂರು ದಿನಗಳ ಕಾಲ ನಡೆದ ವಿಜಯನಗರ ವೈಭವದ ಉತ್ಸವಕ್ಕೆ ಭಾನುವಾರ ಲಕ್ಷಾಂತರ ಜನಸಾಗರದ ನಡುವೆ ಅಂತಿಮ ತೆರೆ ಬಿದ್ದಿತು. ಗಾಯತ್ರಿ ಪೀಠ ಬಳಿಯ ಮುಖ್ಯ ವೇದಿಕೆಯಲ್ಲಿ ಉತ್ಸವ ಯಶಸ್ಸಿಗೆ ಶ್ರಮಿಸಿದವರಿಗೆ ಧನ್ಯವಾದ ತಿಳಿಸುವ ಜತೆಗೆ ಜಿಲ್ಲಾಡಳಿತವು ಉತ್ಸವ ಯಶಸ್ಸಿನ ಕಡಲಲ್ಲಿ ಸಂಭ್ರಮಿಸಿತು.

ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಪಂಪಾ ವಿರೂಪಾಕ್ಷ, ಲಕ್ಷ್ಮೀದೇವಿ, ಮಾತಂಗಿ ತಾಯಿ ಆಶೀರ್ವಾದದಿಂದ ಉತ್ಸವ ಯಶಸ್ವಿಯಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿ ನಿಂದ ಉತ್ತಮವಾಗಿ ಉತ್ಸವ ಆಯೋಜಿಸ ಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಬರಬೇಕಿತ್ತು.

ಕಾರಣಾಂತರದಿಂದ ಬರಲಾಗಲಿಲ್ಲ. ಉಸ್ತುವಾರಿ ಸಚಿವ ಜಮೀರ್ ಖಾನ್ ಬಹಳ ಶ್ರಮವಹಿಸಿ ಉತ್ಸವ ಆಯೋಜಿಸುತ್ತಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಜನರಿದ್ದರೆ ಉತ್ಸವ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.

ಡಿಸಿ ಎಂ.ಎಸ್.ದಿವಾಕರ್ ಮಾತನಾಡಿ, ಬಿಸಿಲು ಹೆಚ್ಚಿದ್ದು ಜನ ಬರುವುದಿಲ್ಲ ಎಂದು ಬಹಳ ಅಂಜಿಕೆ ಇತ್ತು. ಕುಡಿವ ನೀರು, ಧೂಳು ನಿಯಂತ್ರಣ ಇತರ ಕ್ರಮ ಕೈಗೊಂಡಿದ್ದೇವೆ. ವಿರೂಪಾಕ್ಷೇಶ್ವರ, ಉದ್ದಾನ ವೀರಭದ್ರೇಶ್ವರನ ಆಶೀರ್ವಾದದಿಂದ ಎಲ್ಲ ಸುಸೂತ್ರವಾಗಿ ನಡೆದಿದೆ. ಜಾತ್ರೆ, ಉತ್ಸವ ಅಂದರೆ ಜನಜಂಗುಳಿ, ಟ್ರಾಫಿಕ್, ಶಿಳ್ಳೆ, ಕೇಕೆ ಇರಬೇಕು. ಅಂದಾಗ ಅದು ಜಾತ್ರೆ ಆಗಲಿದೆ. ಯಶಸ್ಸಿಗೆ ಕಾರಣ ನಾನೊಬ್ಬನಲ್ಲ.

ನನ್ನ ಹಿಂದೆ ನಮ್ಮ ಅಧಿಕಾರಿಗಳ ತಂಡ ಹಗಲಿರುಳು ಶ್ರಮವಹಿಸಿ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್, ಶಾಸಕ ಎಚ್.ಆರ್.ಗವಿಯಪ್ಪ ಇನ್ನಿತರರ ಸಹಕಾರದಿಂದ ಉತ್ಸವ ಯಶಸ್ಸು ಕಂಡಿದೆ.

ಸಣ್ಣಪುಟ್ಟ ತಪ್ಪುಗಳು, ಲೋಪಗಳಾಗಿದ್ದರೆ ಮನ್ನಿಸಿ. ಟೀಕೆ, ಟಿಪ್ಪಣಿಗಳು ಸಹಜ. ಬರುವ ವರ್ಷ ಆ ತಪ್ಪುಗಳನ್ನು ತಿದ್ದಿಕೊಂಡು ಅಚ್ಚುಕಟ್ಟಾದ ಉತ್ಸವ ಆಯೋಜಿಸಲಾಗುವುದು ಎಂದರು. ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಚಿತ್ರನಟಿ ರಮ್ಯಾ, ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಶ್ರೀಹರಿಬಾಬು, ಎಡಿಸಿ ಬಾಲಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net