

ಹಂಪಿ: ಹಂಪಿ ಉತ್ಸವದ ನಿಮಿತ್ತ ಹಂಪಿ ಗಾಯತ್ರಿ ಪೀಠ ಮೈದಾನದ ಎಂ.ಪಿ.ಪ್ರಕಾಶ ಪ್ರಧಾನ ವೇದಿಕೆಯಲ್ಲಿ ಶನಿವಾರ ರಾತ್ರಿ ಗಾಯಕ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಹಾಡಿದ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.
ರಾತ್ರಿ ಹತ್ತರ ಸುಮಾರಿಗೆ ವೇದಿಕೆ ಮೇಲೇರಿ ಬಂದ ಅರ್ಜುನ್ ಜನ್ಯ ಹಾಡಿದ ಹಾಡುಗಳಿಗೆ ಜನ ಮನಸೋತು ಕುಣಿದರು. ಅವರ ಹಾಡಿನ ಮೋಡಿಗೆ ಮೈ ಮರೆತರು. ಉತ್ಸವದ ಮೊದಲ ದಿನ ಜನ ಇರಲಿಲ್ಲ. ಎಲ್ಲೆಡೆ ನಿರುತ್ಸಾಹ ಎದ್ದು ಕಾಣುತ್ತಿತ್ತು. ಇದರ ನಡುವೆ ವೇದಿಕೆ ಮೇಲೆ ಬಂದ ಅರ್ಜುನ್ ಜನ್ಯ ಅದನ್ನು ದೂರ ಮಾಡಿದರು. ವೇದಿಕೆ ಮುಂದೆನೆರೆದಿದ್ದ ಜನರು ಕಾರ್ಯಕ್ರಮ ಕಣ್ತುಂಬಿಕೊಂಡರು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಕಣ್ಮನ ಸೆಳೆದ ಶ್ವಾನ ಪ್ರದರ್ಶನ
‘ಜೈ ಆಂಜನೇಯ, ಪ್ರಸನ್ನ ಆಂಜನೇಯ’ ಹಾಡಿನೊಂದಿಗೆ ಅವರ ಗೀತ ಗಾಯನದ ಯಾನ ಆರಂಭಿಸಿದರು. ‘ಚುಟು ಚುಟು ಅಂತೈತೆ’, ‘ಅಧ್ಯಕ್ಷ, ಅಧ್ಯಕ್ಷ’ ಹೀಗೆ ಸಾಲು ಹಾಡುಗಳನ್ನು ಹಾಡಿದರು. ಹೀಗೆ ತಡರಾತ್ರಿ 2 ಗಂಟೆಯ ವರೆಗೂ ಕಾರ್ಯಕ್ರಮ ನಡೆಸಿಕೊಟ್ಟರು.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಿನ್ನೆಲೆ ಗಾಯಕ ಜಸ್ಕರನ್ ಸಿಂಗ್ ಸೇರಿದಂತೆ ಇನ್ನಿತರ ಗಾಯಕರ ಕನ್ನಡ ಹಾಡುಗಳ ಮೋಡಿಗೆ ಪ್ರೇಕ್ಷಕರು ಫಿದಾ ಆದರು. ಕಾರ್ಯಕ್ರಮಕ್ಕೆ ಆಗಮಿಸುವ ಪ್ರೇಕ್ಷಕರಿಗೆ ಪಾಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿದ ಜನರು ಆಗಮಿಸಿದ್ದರಿಂದ ಪಾಸ್ ಗಳಿದ್ದರೂ ಸೀಟ್ ಸಿಗದೆ ನೂರಾರು ಜನರು ಕಾರ್ಯಕ್ರಮವನ್ನು ನಿಂತುಕೊಂಡೇ ವೀಕ್ಷಿಸಿದರು. ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು.