ಹಂಪಿ ಉತ್ಸವದಲ್ಲಿ ಕಣ್ಮನ ಸೆಳೆದ ಶ್ವಾನ‌ ಪ್ರದರ್ಶನ

Hampi Utsav Dog Show
ಪ್ರದರ್ಶನಕ್ಕೆ ಬಂದ ಮುಧೋಳ ನಾಯಿ ಮರಿಗಳು. ಗದಗದ ನೀಲಕಂಠ ಅವರ ಚಾಂಪಿಯನ್ ಆಫ್ ಚಾಂಪಿಯನ್ ಮುಧೋಳ್ ನಾಯಿ. ಪೊಲೀಸ್ ನ್ಯಾಯಿಗೆ ಶಿಸ್ತಿನ ತರಬೇತಿ‌ ನೀಡಿದ ಶ್ವಾನದ ದಳದ ಸಿಬ್ಬಂದಿ. ಶ್ವಾನ ಪ್ರದರ್ಶನಕ್ಕೆ ಆಗಮಿಸಿದ ವಿವಿಧ ತಳಿಯ ನಾಯಿಗಳು. (ಚಿತ್ರ: ನಾಗರೆಡ್ಡಿ ಹಡಗಲಿ)
Published on

ಹಂಪಿ: ಹಂಪಿ ಉತ್ಸವದಲ್ಲಿ ಮೂರು ದಿನಗಳವರೆಗೆ ನಡೆದ ನಾನಾ ಕಾರ್ಯಕ್ರಮಗಳು ಜನ ಮನಸೂರೆಗೊಂಡರೆ, ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಎಲ್ಲರನ್ನು ಆಕರ್ಷಿಸಿತು.

ಹಂಪಿ ವಿಶ್ವ ಪಾರಂಪರಿಕ ತಾಣ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಬದಿಯ ವಿಶಾಲ ಮೈದಾನದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಶ್ವಾನಗಳನ್ನು ವೀಕ್ಷಿಸಲು ಕಿಕ್ಕಿರಿದು ಜನ ಸೇರಿದ್ದರು.‌ ಬಿಸಿಲನ್ನೂ ಲೆಕ್ಕಿಸದೆ ಶ್ವಾನಪ್ರಿಯರು ಕೊನೆಯವರೆಗೂ ಸ್ಥಳದಿಂದ ಕದಲದೇ ಆಸೀನರಾಗಿದ್ದರು. ಅಪರೂಪದ ವೈಶಿಷ್ಟ್ಯ ಹೊಂದಿದ್ದ ಶ್ವಾನಗಳ ಬುದ್ಧಿಮತ್ತೆಗೆ ಹುಬ್ಬೇರಿಸಿದರು.

Hampi Utsav Dog Show Prize Distribution

ಹೊಸಪೇಟೆ, ಕಮಲಾಪುರ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ ಸೇರಿ ನಾನಾ ಕಡೆಯಿಂದ ಪ್ರದರ್ಶನಕ್ಕಾಗಿ ಆಗಮಿಸಿದ್ದ ಹಲವಾರು ತಳಿಯ ಶ್ವಾನಗಳು ಬೌ.. ಬೌ.., ಕುಂಯಿ.. ಕುಂಯಿ.., ಫುರ್.. ಫುರ್.. ಹೀಗೆ ನಾನಾ ಬಗೆಯ ಸದ್ದಿನ ಮೂಲಕ ಗಮನ ಸೆಳೆದಿದ್ದು ವಿವಿಧ ತಳಿಯ ನಾಯಿಗಳು. ಕೆಲವು ನಾಯಿಗಳು ನೋಡಲು ಹೂವಿನಂತೆ ನಾಜೂಕು, ಮತ್ತೆ ಕೆಲವು ವ್ಯಾಘ್ರ. ಅವುಗಳ ಆಟ ಒಂದೆರಡಲ್ಲ. ಅವುಗಳನ್ನು ಸಂಭಾಳಿಸಿ, ಜನರ ಮುಂದೆ ತಂದು ಪ್ರದರ್ಶಿಸಿದ್ದೇ ದೊಡ್ಡ ಸಾಹಸವಾಗಿತ್ತು.

ಶ್ವಾನ ಪ್ರದರ್ಶನದಲ್ಲಿ ಬಾಗಲಕೋಟ ಜಿಲ್ಲೆಯ ಮುಧೋಳ ಮೂಲದ ಮುಧೋಳ ಶ್ವಾನಗಳು ನೆರೆದ ಜನರ ಗಮನ ಸೆಳೆದವು. 3ತಿಂಗಳಿಂದ 5 ವರ್ಷದವರೆಗಿನ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಬಾಗಲಕೋಟ ಜಿಲ್ಲೆಯ ಮುಧೋಳ, ರಾಜ್ಯ, ಹೊರ ರಾಜ್ಯ ಸೇರಿ ವಿದೇಶಿ ಮೂಲದ ನಾನಾ ತಳಿಯ ಶ್ವಾನಗಳು ಮೈದಾನದಲ್ಲಿ ಸಿದ್ಧಗೊಳಿಸಿದ್ದ ರಿಂಗ್‌ನಲ್ಲಿ ಪ್ರದರ್ಶನಕ್ಕಿಳಿಯುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದವು.

Hampi Utsav Dog Show 2

ಪ್ರದರ್ಶನದಲ್ಲಿ ಅಖಿತ್‌, ಬೆಗಲ್‌, ಬಾಕ್ಸರ್‌, ಬುಲ್‌ ಡಾಗ್‌, ಬುಲ್‌ಮಸ್ತಿಫ್‌, ಸೆಂಟರ್‌ ಏಷಿಯನ್‌ ಶೆಫರ್ಡ್‌ ಕುಕ್ಕರ್‌ ಸ್ಪೇನಲ್‌, ಡಾಲ್‌ಮಟೀನ್‌, ಫಾಕ್ಸ್‌ ಟೆರೀರ್‌, ಜರ್ಮನ್‌ ಶೆಫರ್ಡ್‌, ಗ್ರೇಟ್‌ಡ್ಯಾನಿ, ಐರಿಶ್‌ ಸೆಟರ್‌, ಮುಧೋಳ, ಪೊಮೆರನಿಯನ್‌, ಪುಗ್‌ ಸೇರಿ ಅಂದಾಜು 20 ತಳಿಗಳ 70ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನಗೊಂಡವು.

ಶ್ವಾನ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಚಾಲನೆ ನೀಡಿದರು. ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ.ಬಸವರಾಜ್ ಬಾಳಣ್ಣನವರ್, ಹಾಸನ ಪಶು ವೈದ್ಯಕೀಯ ಕಾಲೇಜಿನ ಫೋಫೆಸರ್ ಡಾ.ಮಂಜುನಾಥ ಶ್ವಾನ ಪ್ರದರ್ಶನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಮೂಲ ಜಾತಿ ತಳಿ, ದೇಹದಾರ್ಡ್ಯತೆ, ಚುರುಕುತನ, ಚಾತುರ್ಯತೆ ಹಾಗೂ ಮಾಲೀಕರೊಂದಿಗೆ ಅವಿನಾಭಾವ ಸಂಬಂಧದ ಆಧಾರದ ಮೇಲೆ ವಿಜೇತ ಶ್ವಾನಗಳನ್ನು ಆಯ್ಕೆ ಮಾಡಲಾಯಿತು. ಗದಗದ ನೀಲಕಂಠ ಅವರ ಮುಧೋಳ್ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿಯವರ ಡಾಬರ್ ಮನ್ ಶ್ವಾನ ಎರಡನೇ ಸ್ಥಾನ, ಕೊಟ್ಟೂರಿನ ಕೆ.ಪಿ.ಶಿವಕುಮಾರ್ ಅವರ ಲ್ಯಾಬ್ರಡಾರ್ ಶ್ವಾನ ತೃತೀಯ ಸ್ಥಾನ ಪಡೆಯಿತು. ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿಜೇತ ಶ್ವಾನಗಳಿಗೆ ಕ್ರಮೇಣವಾಗಿ ಮೊದಲ ಸ್ಥಾನಕ್ಕೆ 10 ಸಾವಿರ, ಎರಡನೇ ಸ್ಥಾನಕ್ಕೆ 7.5 ಸಾವಿರ ರೂ. ಹಾಗೂ‌ ಮೂರನೇ 5 ಸಾವಿರ ರೂ. ನಗದು‌ ಬಹುಮಾನ ನೀಡಲಾಯಿತು.

ಪಶುಸೇವೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಪೋಮ್ ಸಿಂಗ್ ನಾಯ್ಕ, ಸಹಾಯಕ ನಿರ್ದೇಶಕ ಡಾ.ಆಕ್ತರ್, ಸ್ಥಾನಿಕಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ, ಡಾ.ಯುಗಂಧರ್ ಮಾನ್ವಿ, ಡಾ.ಸಂತೋಷ್, ಡಾ.ಸತೀಶ್, ಚಿದಾನಂದಪ್ಪ.ಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net