ಹಕ್ಲಾಡಿ ಶಾಲೆಗೆ ಖಾಸಗಿ ಸಂಸ್ಥೆಗಳ ಅನುದಾನ ಸೋಲಾರ್ ಸ್ಪರ್ಶ, ವಿದ್ಯುತ್ ಸಮಸ್ಯೆಗೆ ಮುಕ್ತಿ

solar
ಹಕ್ಲಾಡಿ ಪ್ರೌಢಶಾಲೆಗೆ ಅಳವಡಿಸಿರುವ ಸೌರಶಕ್ತಿ ಪರಿಕರಗಳು
Published on

ಬಿ.ರಾಘವೇಂದ್ರ ಪೈ ಗಂಗೊಳ್ಳಿ

ಪ್ರತಿ ತಿಂಗಳು ಸಾವಿರಾರು ರೂ. ವಿದ್ಯುತ್ ಬಿಲ್ ಬರುತ್ತಿದ್ದ ಕುಂದಾಪುರ ತಾಲೂಕಿನ ಹಕ್ಲಾಡಿ ಕೆಎಸ್‌ಎಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸರ್ಕಾರಿ ಪ್ರೌಢಶಾಲೆ ಈಗ ಸಂಪೂರ್ಣ ಸೋಲಾರ್ ಸ್ವಾವಲಂಬಿ ಶಾಲೆಯಾಗಿ ಪರಿವರ್ತನೆಗೊಂಡಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಸೌರಶಕ್ತಿ ಆಧಾರಿತ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ಮಾರ್ಟ್ ಕ್ಲಾಸ್, ಅಟಲ್ ಟಿಂಕರಿಂಗ್ ಲ್ಯಾಬ್, ಫ್ಯಾನ್, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ನಾಟಕ ಶಾಲೆ, ನೀರಿನ ಮೋಟಾರ್ ಹೀಗೆ ಎಲ್ಲ ಸೇರಿ ತಿಂಗಳಿಗೆ ಸುಮಾರು 5,500 ರೂ. ವಿದ್ಯುತ್ ಬಿಲ್ ಬರುತ್ತಿದ್ದ ಹಕ್ಲಾಡಿ ಸರ್ಕಾರಿ ಪ್ರೌಢಶಾಲೆ ಸಂಪೂರ್ಣ ಸೌರಶಕ್ತಿಯನ್ನೇ ಬಳಸುತ್ತಿರುವ ಮೊದಲ ಶಾಲೆ. ಎಂಬ ಹಿರಿಮೆ ಈ ಶಾಲೆಯದ್ದಾಗಿದೆ. ಸಂಪೂರ್ಣ ಸೋಲಾರ್ ಶಕ್ತಿಯನ್ನೇ ಬಳಸುತ್ತಿರುವುದರಿಂದ ವಾರ್ಷಿಕ ಕನಿಷ್ಠ 50ರಿಂದ 55 ಸಾವಿರ ರೂ. ಉಳಿತಾಯವಾಗಲಿದೆ. ಅದಕ್ಕಿಂತಲೂ ಮುಖ್ಯವಾಗಿ ಆಗಾಗ್ಗೆ ಕೈಕೊಡುವ ವಿದ್ಯುತ್ ಸಮಸ್ಯೆಗೂ ಮುಕ್ತಿ ಸಿಕ್ಕಂತಾಗಿದೆ.

ಬೆಂಗಳೂರು ಮೂಲದ ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿಜಿಎಂ ಪ್ರಶಾಂತ ಜೋಶಿ ಒಂದು ದಿನ ಶಾಲೆಗೆ ಭೇಟಿ ನೀಡಿ, ಅಲ್ಲಿನ ಉತ್ತಮ ಡಿಜಿಟಲ್ ಸಲಕರಣೆಗಳನ್ನು ನೋಡಿ ಖುಷಿಪಟ್ಟು, ಶಾಲೆಗೆ ಸಿಎಸ್‌ಆರ್ ಅನುದಾನದಡಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಶಾಲೆಗೆ ಈಗಿರುವ ಉಪಕರಣಗಳಿಗೆಲ್ಲ ಒಟ್ಟಾರೆ 10 ಕೆ.ವಿ. ಸೋಲಾರ್ ಎನರ್ಜಿ ಅಗತ್ಯವಿದ್ದು, ಈ ಸಂಸ್ಥೆ 15 ಕೆ.ವಿ. ಎನರ್ಜಿ ಸೌಲಭ್ಯ ನೀಡಿದೆ. ಅದಕ್ಕಾಗಿ 12 ಲಕ್ಷ ರೂ. ವಿನಿಯೋಗಿಸಿದೆ. ಸೆಲ್ಕೋ ಸಂಸ್ಥೆ ಸಹಯೋಗದೊಂದಿಗೆ ಕೇವಲ 15 ದಿನಗಳಲ್ಲಿಯೇ ಶಾಲೆ ಸಂಪೂರ್ಣ ಸೋಲಾರ್ ಸ್ವಾವಲಂಬಿಯಾಗಿದೆ.
ಪ್ರಾಥಮಿಕ, ಪ್ರೌಢ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳೆಲ್ಲ ಸೇರಿ ಉಡುಪಿ ಜಿಲ್ಲೆಯಲ್ಲಿ 1,098 ಹಾಗೂ ದ.ಕ. ಜಿಲ್ಲೆಯಲ್ಲಿ 1,782 ಶಾಲೆಗಳಿವೆ. ಈ ಎರಡು ಕರಾವಳಿ ಜಿಲ್ಲೆಗಳ ಒಟ್ಟು 2,880 ಶಾಲೆಗಳ ಪೈಕಿ ಸಂಪೂರ್ಣ ಸೌರಶಕ್ತಿ ಬಳಸಲ್ಪಡುವ ಮೊದಲ ಶಾಲೆ ಎನ್ನುವ ಹೆಗ್ಗಳಿಕೆ ಈ ಹಕ್ಲಾಡಿ ಪ್ರೌಢಶಾಲೆಯದ್ದಾಗಿದೆ.

ಉತ್ತಮ ವ್ಯವಸ್ಥೆ, ಗುಣಮಟ್ಟ

ಗ್ರಾಮೀಣ ಭಾಗದಲ್ಲಿದ್ದರೂ, ಈ ಸರ್ಕಾರಿ ಶಾಲೆ ಗುಣಮಟ್ಟದಲ್ಲಿ, ಉತ್ತಮ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಮುಂಚೂಣಿ ಶಾಲೆಗಳಲ್ಲಿ ಒಂದಾಗಿದೆ. ಇದಕ್ಕೊಂದು ನಿದರ್ಶನವೆಂದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಈವರೆಗೆ 82 ಮಂದಿ ಹೊಸದಾಗಿ ದಾಖಲಾತಿ ಮಾಡಿಕೊಂಡಿದ್ದಾರೆ. ಕಳೆದ ವರ್ಷವೂ 85 ಮಂದಿ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದರು. ಸದ್ಯ 240 ಮಂದಿ ವಿದ್ಯಾರ್ಥಿಗಳಿದ್ದಾರೆ. ಗೌರವ ಶಿಕ್ಷಕರ ಸಹಿತ ಒಟ್ಟು 9 ಮಂದಿಯಿದ್ದಾರೆ. ಶಾಲೆಗೆ 54 ವರ್ಷಗಳ ಇತಿಹಾಸವಿದೆ.

ಹಕ್ಲಾಡಿ ಸರ್ಕಾರಿ ಪ್ರೌಢಶಾಲೆ ಸಂಪೂರ್ಣ ಸೋಲಾರ್ ಸ್ವಾವಲಂಬಿ ಅನ್ನುವ ಹೆಗ್ಗಳಿಕೆ ಬಗ್ಗೆ ಖುಷಿಯಿದೆ. ಇದಕ್ಕೆ ಸಹರಿಸಿದ ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿಜಿಎಂ ಪ್ರಶಾಂತ ಜೋಶಿ, ಸೆಲ್ಕೋ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಇದರಿಂದ ತಿಂಗಳಿಗೆ ಕನಿಷ್ಠ 5 ಸಾವಿರ ರೂ. ವಿದ್ಯುತ್ ಬಿಲ್ ಉಳಿತಾಯವಾಗಲಿದೆ. ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್‌ಗಳೆಲ್ಲ ಇರುವುದರಿಂದ ಹಳ್ಳಿ ಪ್ರದೇಶಗಳಲ್ಲಿ 24 ಗಂಟೆ ವಿದ್ಯುತ್ ಒದಗಿಸುವುದು ಕಷ್ಟ. ಇರುವ ಬ್ಯಾಟರಿಯೂ ಸಾಲದು. ಈ ಸೋಲಾರ್ ವ್ಯವಸ್ಥೆಯಿಂದ ಸಹಕಾರಿಯಾಗಲಿದೆ. -ಮಂಜುನಾಥ್ ಎಸ್., ಮುಖ್ಯಶಿಕ್ಷಕ, ಹಕ್ಲಾಡಿ ಸರ್ಕಾರಿ ಪ್ರೌಢಶಾಲೆ

ಹಕ್ಲಾಡಿ ಸರ್ಕಾರಿ ಪ್ರೌಢಶಾಲೆ ಸಂಪೂರ್ಣ ಸೋಲಾರ್ ಸ್ವಾವಲಂಬಿ ಎನ್ನುವ ಹೆಗ್ಗಳಿಕೆ ಬಗ್ಗೆ ಖುಷಿಯಿದೆ. ಇದಕ್ಕೆ ಸಹರಿಸಿದ ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿಜಿಎಂ ಪ್ರಶಾಂತ ಜೋಶಿ, ಸೆಲ್ಕೋ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಸೂರ್ಯನ ಶಕ್ತಿ, ನಮ್ಮ ಶಕ್ತಿ. ಶಕ್ತಿ ಸ್ವಾವಲಂಬನೆಯ ಮೊದಲ ಹೆಜ್ಜೆಯಿದು.-ಡಾ.ಕಿಶೋರ್ ಕುಮಾರ್ ಶೆಟ್ಟಿ, ಹಿರಿಯ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net