

ಮೂಲ್ಕಿ: ಸಮಾಜದ ಅಶಕ್ತ, ಬಡ, ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಪಾರದರ್ಶಕವಾಗಿ ವಿತರಿಸಲಾಗುತ್ತಿದ್ದು ಅರ್ಹ ಫಲಾನುಭವಿಗಳು ಯೋಜನೆಗಳ ಉಪಯೋಗ ಪಡೆಯಬೇಕು ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಮೂಲ್ಕಿ ತಾಲೂಕು ವ್ಯಾಪ್ತಿಯ ಕೊರಗ ಜನಾಂಗದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಕೊಲ್ಲೂರು ಪದವು ಪ್ರದೇಶದಲ್ಲಿ ಕೊರಗ ಜನಾಂಗಕ್ಕೆ ಜಾಗ ಗುರುತಿಸಲಾಗಿದ್ದು, 8 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ 21 ಮಂದಿ ಫಲಾನುಭವಿಗಳಿಗೆ ಕಲ್ಲಮುಂಡ್ಕೂರು ಪ್ರದೇಶದಲ್ಲಿ ಸೂಕ್ತ ಜಾಗ ಗುರುತಿಸಿ ಹಕ್ಕುಪತ್ರ ನೀಡಲಾಗುವುದು. ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವುದೇ ಮೂಲ ಉದ್ದೇಶ. ಕೂಡಲೇ ಅವರಿಗೆ ಸೂರು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಕೊರಗ ಅಭಿವೃದ್ಧಿ ಸಂಘದ ಒಕ್ಕೂಟದ ಕರ್ನಾಟಕ ಕೇರಳ ವಿಭಾಗ ಅಧ್ಯಕ್ಷೆ ಸುಶೀಲಾ ಮಾತನಾಡಿ, ಜನಪ್ರತಿನಿಧಿಗಳು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಸುನೀಲ್ ಆಳ್ವ, ಮೂಲ್ಕಿ ತಹಸೀಲ್ದಾರ್ ಶ್ರೀಧರ್ ಎಸ್., ಮುಖ್ಯಾಧಿಕಾರಿ ಮಧುಕರ್, ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಅಧಿಕಾರಿ ಮೋಹನ್, ವಿ.ಎ.ಸುಜಿತ್, ಐಟಿಡಿಪಿ ಯೋಜನೆ ಸಮನ್ವಯ ಅಧಿಕಾರಿ ಬಸವರಾಜು, ಸಹಾಯಕ ನಿರ್ದೇಶಕ ಸುರೇಶ್, ತನಿಖಾಧಿಕಾರಿ ನಿಂಗರಾಜು, ಕೊರಗ ಅಭಿವೃದ್ಧಿ ಸಂಘದ ಕೋ ಆರ್ಡಿನೇಟರ್ ಕೆ.ಪುತ್ರನ್, ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ರಂಗನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸುಮಾರು ಎಂಟು ಮಂದಿ ಕೊರಗ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.