ಎಚ್1ಎನ್1 ತಗ್ಗಿಸಿದ ಕರೊನಾ; ಲಾಕ್​ಡೌನ್, ಕೋವಿಡ್ ಮಾರ್ಗಸೂಚಿಯೂ ಕಾರಣ?

State-2
Published on

ಬೆಂಗಳೂರು: ಕರೊನಾ ಸಮಯದಲ್ಲಿ ಎಚ್1ಎನ್1 ನಿಯಂತ್ರಣಕ್ಕೆ ಬಂದಿದ್ದು, 3 ತಿಂಗಳಿ ನಿಂದ ಪ್ರಕರಣಗಳು ವರದಿಯಾಗಿಲ್ಲ. ಪ್ರತಿ ವರ್ಷ ಮಳೆಗಾಲ ಬಂತೆಂದರೆ, ಸಾವಿರಾರು ಮಂದಿ ಎನ್1ಎನ್1 ಸೋಂಕಿನಿಂದ ಬಳಲುತ್ತಿದ್ದರು. ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ 15,119 ಮಂದಿ ಎಚ್1ಎನ್1 ಬಾಧಿತರಾಗಿದ್ದು, 532 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ವರ್ಷ 2,030 ಮಂದಿ ಕಾಡಿದ್ದ ಸೋಂಕು 96 ಜನರನ್ನು ಬಲಿ ಪಡೆದಿತ್ತು.

ವರ್ಷದ ಆರಂಭದಲ್ಲಿ ಅಂದರೆ ಮೊದಲ 3 ತಿಂಗಳಲ್ಲಿ 400ಕ್ಕೂ ಹೆಚ್ಚು ಮಂದಿಯಲ್ಲಿ ಎಚ್1ಎನ್1 ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದರು. ನಂತರದಲ್ಲಿ ಕೆಲ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 458 ತಲುಪಿತ್ತು. ಮಳೆಗಾಲ ಆರಂಭದೊಂದಿಗೆ ಈ ಪ್ರಕರಣಗಳು ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿತ್ತು. ಹೀಗಾಗಿ ಇಲಾಖೆ ಸಂಬಂಧಿಪಟ್ಟ ಅಧಿಕಾರಿಗಳಿಗೆ ಎಚ್1ಎನ್1 ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮದೊಂದಿಗೆ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿತ್ತು.

ನಿಯಮಗಳಿಂದ ನಿಯಂತ್ರಣ: ಕೋವಿಡ್-19ರ ನಿಯಂತ್ರಣಕ್ಕಾಗಿ ಸರ್ಕಾರ ಹೇರಿದ ಲಾಕ್​ಡೌನ್ ಹಾಗೂ ಕರೊನಾ ಬಗ್ಗೆ ಜನರಲ್ಲಿ ಮೂಡಿರುವ ಭೀತಿಯಿಂದಾಗಿ ಎಚ್1ಎನ್1 ಸೋಂಕು ಕಡಿಮೆಯಾಗಿದೆ. ಕೋವಿಡ್ ಭೀತಿಯಿಂದ ಜನರು ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿರುವುದು, ಮಾಸ್ಕ್ ಧರಿಸಿ ಓಡಾಡುತ್ತಿರುವುದು, ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದಕ್ಕೆ ಕಾರಣ. ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಎಲ್ಲೆಡೆ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಿದ್ದೂ ಸೋಂಕು ಕಡಿಮೆಯಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net