ಒಂದ್ಸಲ ಓಡಿಸಿ ನೋಡ್ತೀನಿ ಎಂದು ಹೇಳಿ ಕೆಟಿಎಂ ಬೈಕ್​ ಕದ್ದ ಕಳ್ಳ..!

ktm
Published on

ಉತ್ತರಕನ್ನಡ: ಇಲ್ಲೊಬ್ಬ ಯುವಕ ಬೈಕ್​ ಹೇಗಿದೆ ನೋಡ್ತೀನಿ ಎಂದವನಿಗೆ ಕೀಲಿ ಕೈ ಕೊಟ್ಟು ಬೈಕ್​ ಕಳೆದುಕೊಂಡಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಬಾಳೆಗುಳಿ ಬಳಿ ಈ ಘಟನೆ ನಡೆದಿದೆ.

'ನಾನೂ ಕೆಟಿಎಂ ಬೈಕ್​ ಖರೀದಿಸಬೇಕು ಅಂತ ಇದ್ದೇನೆ. ಒಂದ್ಸಲ ಬೈಕ್​ ಹೇಗಿದೆ ನೋಡಬಹುದಾ. ಕೀಲಿ ಕೈ ಕೊಡಿ, ಓಡಿಸಿ ನೋಡ್ತೀನಿ. ಒಂದು ರೌಂಡ್​​ ಸವಾರಿ ಮಾಡ್ತೀನಿ. ಬೈಕ್​ ಹೇಗಿದೆ ಅಂತ ಗೊತ್ತಾಗುತ್ತೆ' ಎಂದು ಈ ಭೂಪ ಕೇಳಿದ್ದಾನೆ. ಇರಬಹುದೇನೋ ಅಂತ ನಂಬಿ ಅರವಿಂದ ತಾಂಡೇಲ್​ ಎನ್ನುವಾತ ತನ್ನ ಬೈಕ್​ ಮತ್ತು ಕೀಯನ್ನು ಕಳ್ಳನ ಕೈಗೊಪ್ಪಿಸಿದ್ದಾನೆ.

ಇದನ್ನೇ ಅವಕಾಶ ಎಂದು ಭಾವಿಸಿದ ಈ ಭೂಪ ಕೆಟಿಎಂ ಚಲಾಯಿಸಿಕೊಂಡು ಫಾಸ್ಟ್​ ಆಗಿ ಪರಾರಿ ಆಗಿದ್ದಾನೆ. ಎಷ್ಟು ಹೊತ್ತಾದರೂ ಬೈಕ್​ ತೆಗೆದುಕೊಂಡು ಹೋದ ವ್ಯಕ್ತಿ ಬಂದಿಲ್ಲ ಎಂದು ಅರವಿಂದ ತಾಂಡೇಲ್​ ಚಿಂತಿತರಾಗಿದ್ದಾರೆ. ಕಡೆಗೆ ಈ ಬೈಕ್​ ಕಾಯುತ್ತಾ ಕುಳಿತರೆ ಹಿಂದಕ್ಕೆ ಬರಲ್ಲ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುರ್ವಿಧಿ ಏನೆಂದರೆ ಕಳೆದ ವಾರವಷ್ಟೇ ಎರಡೂವರೆ ಲಕ್ಷ ಹಣ ನೀಡಿ ಅರವಿಂದ ತಾಂಡೇಲ್​ ಕೆಟಿಎಮ್ ಬೈಕ್ ಖರೀದಿಸಿದ್ದರು.

ಕಳ್ಳ ಬೈಕ್ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಪೊಲೀಸರು ಕಳ್ಳನನ್ನು ಹಿಡಿಯಲು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net