

ಗುರುಗ್ರಾಮ: ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಪ್ರಯತ್ನಿಸಿದ ಐಟಿ ಉದ್ಯೋಗಿಯನ್ನು ಹರಿಯಾಣ ಪೊಲೀಸರ ಗುರುವಾರ ಬಂಧಿಸಿದ್ದಾರೆ. ಯುವತಿ ಜತೆ ಹೋಟೆಲ್ಗೆ ತೆರಳಿದ ಯುವಕ ತಡವಾಗಿ ಅಲರ್ಟ್ ಆದರೂ 50 ಸಾವಿರ ರೂ. ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಆರೋಪಿ ಯುವತಿಯು ತನ್ನ ಸ್ನೇಹಿತನೊಂದಿಗೆ ಸೇರಿ ಡೇಟಿಂಗ್ ಆ್ಯಪ್ ಮೂಲಕ ಪರಿಚಿತನಾದ ವ್ಯಕ್ತಿಗೆ ಬೆದರಿಕೆ ಹಾಕಿ 2 ಲಕ್ಷ ರೂ. ಹಣ ವಸೂಲಿ ಮಾಡುವಾಗ ಪೊಲೀಸರ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಇಬ್ಬರ ವಿರುದ್ಧ ಡಿಎಲ್ಎಫ್ ಫೇಸ್ 3 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವರೆಗೆ ಸುಮಾರು 12 ಮಂದಿಗೆ ಇಬ್ಬರು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಬೆದರಿಕೆಯೇ ಇವರಿಬ್ಬರ ಬಂಡವಾಳವಾಗಿತ್ತು. ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಿಸುವುದಾಗಿ ಬೆದರಿಕೆ ಹಣ ವಸೂಲಿ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ಬಿನಿತಾ ಕುಮಾರಿ (27) ಮತ್ತು ಆಕೆಯ ಸ್ನೇಹಿತ ರೋಹ್ಟಕ್ ಜಿಲ್ಲೆಯ ಭೋಲೋಥ್ ಗ್ರಾಮದ ಮಹೇಶ್ ಪೋಗಟ್ (30) ಎಂದು ಗುರುತಿಸಲಾಗಿದೆ.
ಆರೋಪಿ ಯುವತಿಯು ಗುರುಗ್ರಾಮದಲ್ಲಿ ಐಟಿ ಕಂಪನಿಯ ಉದ್ಯೋಗಿಯಾಗಿದ್ದು, ಸ್ನೇಹಿತ ಫೋಗಟ್ ಎನ್ಜಿಒದಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಬಿನಿತಾಗೆ ಸಂತ್ರಸ್ತನ ಪರಿಚಯವಾಗಿದೆ. ಬಳಿಕ ಇಬ್ಬರು ಮೇ 28ರಂದು ಸೆಕ್ಟರ್ 23 ಏರಿಯಾದಲ್ಲಿರುವ ಹೋಟೆಲ್ಗೆ ತೆರಳಿದ್ದರು. ಈ ವೇಳೆ ಸಂತ್ರಸ್ತನಿಗೆ ಬಿಯರ್ ಕುಡಿಯಲು ಬಿನಿತಾ ಒತ್ತಾಯಿಸಿದಳು. ಆದರೆ, ಏನೋ ತಪ್ಪು ನಡೆಯುತ್ತಿದೆ ಎಂದು ಭಾವಿಸಿ, ಕುಡಿಯಲು ನಿರಾಕರಿಸಿದನು ಮತ್ತು ಹೋಟೆಲ್ನಿಂದ ಹೊರಬಂದನು. ನಂತರ ಮಹಿಳೆ ಆತನಿಗೆ ಕರೆ ಮಾಡಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದೀಯಾ, ಈ ಸಂಬಂಧ ದೂರು ನೀಡುತ್ತೇನೆಂದು ಬೆದರಿಕೆ ಹಾಕಿದ್ದಾಳೆ. ಇದಾದ ಆಕೆಯ ಸ್ನೇಹಿತ ಫೋಗಟ್ ಸಂತ್ರಸ್ತನಿಗೆ ಕರೆ ಮಾಡಿ ಸಮಸ್ಯೆ ಇತ್ಯರ್ಥಪಡಿಸಲು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಆದರೆ 2 ಲಕ್ಷ ರೂಪಾಯಿ ಪಾವತಿಗೆ ಸಂತ್ರಸ್ತ ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತನು ಆರಂಭದಲ್ಲಿ ಇಬ್ಬರಿಗೆ 50,000 ರೂಪಾಯಿಗಳನ್ನು ನೀಡಿದನು. ಉಳಿದ ಹಣವನ್ನು ಶೀಘ್ರದಲ್ಲೇ ನೀಡುವುದಾಗಿ ಭರವಸೆ ನೀಡಿದನು. ನಂತರ ಪೊಲೀಸರ ಮೊರೆ ಹೋದನು. ಉಳಿದ ಹಣವನ್ನು ಹಸ್ತಾಂತರಿಸುವ ನೆಪದಲ್ಲಿ ಆರೋಪಿಗಳನ್ನು ಗುರುಗ್ರಾಮದ ಮೌಲ್ಸಾರಿ ಮಾರ್ಕೆಟ್ ಬಳಿ ಕರೆಸಲಾಯಿತು. ಹಣ ತೆಗೆದುಕೊಂಡು ಹೋಗಲು ಬಂದ ಪೋಗಟ್ನನ್ನು ಮೊದಲು ಬಂಧಿಸಲಾಯಿತು. ಬಳಿಕ ಬಿನಿತಾಳನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)