ಅಮೆರಿಕಾದಲ್ಲಿ ಇತಿಹಾಸ ಸೃಷ್ಟಿಸಿದ ಮಹೇಶ್​ ಬಾಬು ಚಿತ್ರ!

Guntur Karam
Published on

ಆಂಧ್ರಪ್ರದೇಶ: ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ ಬಹುನಿರೀಕ್ಷಿತ 'ಗುಂಟೂರು ಕಾರಂ' ಚಿತ್ರ ಬಿಡುಗಡೆಗೂ ಮುನ್ನವೇ ಜಾಗತಿಕವಾಗಿ ಭಾರೀ ಸದ್ದು ಮಾಡುತ್ತಿದ್ದು, ಪ್ರಿನ್ಸ್​ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸಿನಿಮಾ ಸೆಟ್ಟೇರಿದ ಮೊದಲ ದಿನದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ಸಿನಿಮಾ ಈ ಬಾರಿ ಹೊಸ ದಾಖಲೆ ನಿರ್ಮಿಸುವ ಮುಖೇನ ಮತ್ತೊಮ್ಮೆ ಸುದ್ದಿಗೆ ಬಂದಿದೆ. ಅಷ್ಟಕ್ಕೂ ಅಮೆರಿಕಾದಲ್ಲಿ ಮಹೇಶ್​ ಬಾಬು ಚಿತ್ರ ಮಾಡಿದ ಗಮ್ಮತ್ತೇನು? ಎಂಬುದರ ವಿವರ ಹೀಗಿದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಆ್ಯಕ್ಷನ್ ಜಾನರ್​ ಒಳಗೊಂಡ 'ಗುಂಟೂರ್ ಕಾರಂ' ಇದೇ ಜನವರಿ 12, 2024 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಚಿತ್ರತಂಡ ಮಹೇಶ್​ ಬಾಬು ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲು ಎದುರುನೋಡುತ್ತಿದೆ. ಈ ನಡುವೆಯೇ ಹೊಸ ಸುದ್ದಿ ನೀಡಿದ ಚಿತ್ರ ತಯಾರಕರು, ಸಿನಿಮಾ ಅಮೆರಿಕಾದಲ್ಲಿ ಗ್ರ್ಯಾಂಡ್ ಪ್ರೀಮಿಯರ್‌ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಜನವರಿ 11, 2024 ರಂದು ಅಮೆರಿಕಾದಲ್ಲಿ 5,408 ವಿಶೇಷ ಪ್ರೀಮಿಯರ್ ಶೋಗಳನ್ನು ಪಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ 'ಗುಂಟೂರು ಕಾರಂ' ಚಿತ್ರವು, ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬಿಡುಗಡೆ ಸಮೀಪಿಸುತ್ತಿರುವ ಬೆನ್ನಲ್ಲೇ ಭರ್ಜರಿ ಪ್ರಚಾರ ಕಾರ್ಯಗಳನ್ನು ಕೈಗೊಂಡಿರುವ ಚಿತ್ರತಂಡ, ಸಿನಿಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಹೆಚ್ಚು ಶ್ರಮಿಸುತ್ತಿದೆ.

ಚಿತ್ರದಲ್ಲಿ ಮಹೇಶ್​ ಬಾಬುಗೆ ನಾಯಕಿಯಾಗಿ ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಕಾಣಿಸಿಕೊಂಡಿದ್ದು, ಪ್ರಕಾಶ್ ರಾಜ್, ಜಗಪತಿ ಬಾಬು, ರಮ್ಯಾ ಕೃಷ್ಣನ್, ವೆನ್ನೆಲಾ ಕಿಶೋರ್ ಮುಂತಾದವರ ತಾರಾಗಣವಿದೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಾಣ ಈ ಚಿತ್ರಕ್ಕೆ ಥಮನ್ ಸಂಗೀತವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net