23 ಜನರನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು; ಹತ್ಯಾಕಾಂಡದ ಹಿಂದಿದೆ ಕ್ಷುಲ್ಲಕ ಕಾರಣ..

Untitled-design-2024-08-26T142408.462
Published on

ಇಸ್ಲಾಮಾಬಾದ್​​: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಏಕಕಾಲದಲ್ಲಿ ಕನಿಷ್ಠ 23 ಮಂದಿಯನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದಿದ್ದಾರೆ. ಬಂದೂಕುಧಾರಿಗಳು ಟ್ರಕ್​ ಮತ್ತು ಬಸ್​ಗಳನ್ನು ನಿಲ್ಲಿಸಿದ್ದಾರೆ ಬಳಿಕ ಗುರುತಿನ ಚೀಟಿ ಪರಿಶೀಲಿಸುವ ನೆಪದಲ್ಲಿ ಒಬ್ಬೊಬ್ಬರನ್ನು ಶೂಟ್ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಮುಸಾಖೆಲ್‌ನ ರಾರಶಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಲು ಪ್ರಾರಂಭಿಸಿದ್ದಾರೆ. ನಂತರ ಪ್ರಯಾಣಿಕರು ಬಸ್‌ಗಳಿಂದ ಇಳಿಯಲಾರಂಭಿಸಿದರು. ಬಂದೂಕಧಾರಿಗಳು ಪಂಜಾಬ್​​ ಮೂಲದವರನ್ನು ಶೂಟ್​ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಂದರೆ ಪಂಜಾಬಿಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ. ಪಂಜಾಬಿಗಳು ತಮ್ಮ ಸಂಪನ್ಮೂಲಗಳನ್ನು ಅತಿಕ್ರಮಿಸುತ್ತಿದ್ದಾರೆ ಎಂದು ಬಲೂಚ್ ನಂಬುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಲೂಚ್ ಉಗ್ರರು ದಿನವೂ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಪಂಜಾಬ್‌ನಿಂದ ಬಲೂಚಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಭಯೋತ್ಪಾದಕರು ಹಲವಾರು ಬಸ್‌ಗಳು, ಟ್ರಕ್‌ಗಳು ಮತ್ತು ವ್ಯಾನ್‌ಗಳನ್ನು ತಡೆದಿದ್ದಾರೆ ಎಂದು ಮುಸಾಖೆಲ್‌ನ ಹಿರಿಯ ಅಧಿಕಾರಿ ನಜಿಬುಲ್ಲಾ ಕಾಕರ್ ಹೇಳಿದ್ದಾರೆ. ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ. ಪಂಜಾಬ್‌ನಿಂದ ಬರುವ ವಾಹನಗಳನ್ನು ಗುರುತಿಸಿ ಗುಂಡು ಹಾರಿಸಲಾಗಿದೆ ಜತೆಗೆ 10 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದರು.

ಭಯೋತ್ಪಾದಕ ಘಟನೆಯನ್ನು ಖಂಡಿಸಿದ ಸಿಎಂ ಸರ್ಫರಾಜ್ ಬುಗ್ತಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಬಲೂಚಿಸ್ತಾನ ಸರ್ಕಾರವು ತಪ್ಪಿತಸ್ಥರನ್ನು ಶಿಕ್ಷಿಸುವುದನ್ನು ಮುಂದುವರಿಸುತ್ತದೆ. ಉಗ್ರರು ಮತ್ತು ಅವರ ಸಹಾಯಕರನ್ನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಕಾನೂನುಬಾಹಿರ ಬಲೂಚ್ ಲಿಬರೇಶನ್ ಆರ್ಮಿ ಜನರನ್ನು ಹೆದ್ದಾರಿಗಳಿಂದ ದೂರವಿರಲು ಎಚ್ಚರಿಸಿದೆ. ಆದರೆ ದಾಳಿಯ ಹಿಂದೆ ಯಾವುದೇ ತಕ್ಷಣದ ಹೊಣೆಗಾರಿಕೆಯನ್ನು ಇದುವರೆಗೆ ತೆಗೆದುಕೊಂಡಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net