

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್ ದಾಟಿ ಭರ್ಜರಿ ಗೆಲುವಿನತ್ತ ಬಿಜೆಪಿ ಮುನ್ನುಗ್ಗುತ್ತಿದೆ. ಆದರೆ, ಹಳೆಯ ಪಕ್ಷವಾದ ಕಾಂಗ್ರೆಸ್ನ ಸಾಧನೆ ಹೀನಾಯವಾಗಿದ್ದು, ಕೇವಲ 20 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಗುಜರಾತ್ನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಏರುವುದು ಖಚಿತವಾಗಿದ್ದು, ಈ ಚುನಾವಣೆಯಲ್ಲಿ ಹಲವು ದಾಖಲೆಗಳನ್ನು ಕಮಲ ಪಕ್ಷ ತನ್ನ ಹೆಸರಿಗೆ ಬರೆದುಕೊಂಡಿದೆ.
2017ರ ಚುನಾವಣೆಯಲ್ಲಿ ಬಿಜೆಪಿ ಒಟ್ಟು 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಮಾತ್ರ ಗಳಿಸಿತ್ತು. ಆದರೆ, ಈ ಬಾರಿ ದಾಖಲೆ ಬರೆದಿರುವ ಬಿಜೆಪಿ 154 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈಗಾಗಲೇ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಧಿಕೃತವಾಗಿದೆ. ಈ ಬಾರಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಲ್ಲದೆ, ಮತ ಹಂಚಿಕೆಯಲ್ಲೂ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ.
ಕಳೆದ ಬಾರಿಗೆ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ದೇಶದ ಅತ್ಯಂತ ಹಳೆಯ ಮತ್ತು ಪ್ರಬಲ ಪಕ್ಷ ಇಂದು ತುಂಬಾ ದುರ್ಬಲವಾಗಿದೆ. ಮತ ಹಂಚಿಕೆಯಲ್ಲೂ ಕಾಂಗ್ರೆಸ್ ತೀವ್ರ ಕುಸಿತಕೊಂಡಿದೆ. ಬಿಜೆಪಿ ಶೇ. 55ಕ್ಕೂ ಹೆಚ್ಚು ಮತ ಗಳಿಕೆ ಹೊಂದಿದ್ದರೆ, ಕಾಂಗ್ರೆಸ್ ಶೇ. 27ರಿಂದ 15ಕ್ಕೆ ಕುಸಿತ ಕಂಡಿದ್ದು, ಜನರ ವಿಶ್ವಾಸವನ್ನು ಕಳೆದುಕೊಂಡಿದೆ.
ಈ ಬಾರಿ ಬಿಜೆಪಿಯ ಗಮನಾರ್ಹ ಸಾಧನೆ ಏನೆಂದರೆ, ಕಾಂಗ್ರೆಸ್ ಪಾಬಲ್ಯವುಳ್ಳ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ತನ್ನ ಗೆಲುವಿನ ಖಾತೆ ತೆರೆದಿದೆ. ಅದರಲ್ಲೂ ಕಾಂಗ್ರೆಸ್ನ ಮತಬ್ಯಾಂಕ್ ಎಂದೇ ಪರಿಗಣನೆಯಾಗಿದ್ದ ಬುಡಕಟ್ಟು ಬೆಲ್ಟ್ ಮತಗಳು ಈ ಬಾರಿ ಬಿಜೆಪಿ ಪಾಲಾಗಿವೆ. 1950ರಿಂದಲೂ ಬುಡಕಟ್ಟು ಪ್ರದೇಶದಲ್ಲಿ ಕಾಂಗ್ರೆಸ್ ಪ್ರಭಾವ ಜಾಸ್ತಿ ಇತ್ತು. ಆದರೆ, ಇದೇ ಮೊದಲ ಬಾರಿಗೆ ಬಿಜೆಪಿ ಬುಡಕಟ್ಟು ಏರಿಯಾದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿದ್ದು, ಗುಜರಾತ್ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ಸಾಬೀತು ಪಡಿಸಿದೆ.
ಮತ ಎಣಿಕೆಯ ಸದ್ಯದ ಟ್ರೆಂಡ್ ಪ್ರಕಾರ ಗುಜರಾತ್ನಲ್ಲಿ ಆಡಳಿತಾರೂಢ ಬಿಜೆಪಿ 154 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ 20, ಎಎಪಿ 5 ಮತ್ತು ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಒಟ್ಟು 182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್ನಲ್ಲಿ ಅಧಿಕಾರ ರಚನೆಗೆ 92 ಮ್ಯಾಜಿಕ್ ನಂಬರ್ ಬೇಕಿದೆ. ಆದರೆ, ಬಿಜೆಪಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ ಮುಂದೆ ಸಾಗಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. (ಏಜೆನ್ಸೀಸ್)