

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಮತ ಹಂಚಿಕೆಯಲ್ಲಿ ಈ ಬಾರಿ ಭಾರಿ ಬದಲಾವಣೆಯಾಗಿದೆ. ಬಿಜೆಪಿ ಮತಗಳಿಕೆಯಲ್ಲಿ ಏರಿಕೆಯಾಗಿದ್ದು, ಕಾಂಗ್ರೆಸ್ ಮತ ಗಳಿಕೆಯಲ್ಲಿ ಕುಸಿತು ಕಂಡಿದೆ.
ಇದೇ ಮೊದಲ ಬಾರಿಗೆ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ ಗಮನಾರ್ಹ ಸಾಧನೆ ಮಾಡಿದೆ. ಆದರೆ, ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂಬ ಮಾತುಗಳು ಮಾತ್ರ ಹುಸಿಯಾಗಿದ್ದು, ಬಿಜೆಪಿಗೆ ಬದಲಾಗಿ ಕಾಂಗ್ರೆಸ್ ಪಕ್ಷಕ್ಕೆ ಎಎಪಿ ಮಗ್ಗಲು ಮುಳ್ಳಾಗಿದೆ.
ಈ ಬಾರಿ ಕಾಂಗ್ರೆಸ್ ಮತಗಳು ಬಿಜೆಪಿ ಮತ್ತು ಎಎಪಿಗೆ ವಿಭಜನೆಯಾಗಿದೆ. ಶೇ. 55ರಷ್ಟು ಮತ ಗಳಿಸಿ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಕಾಂಗ್ರೆಸ್ ಮತಗಳಿಕೆ ಶೇ. 27ರಿಂದ 15ಕ್ಕೆ ಕುಸಿತ ಕಂಡಿದೆ. ಇದೇ ಮೊದಲ ಬಾರಿಗೆ ಗುಜರಾತ್ ಚುನಾವಣಾ ಅಖಾಡಕ್ಕೆ ಇಳಿದಿರುವ ಎಎಪಿ ಶೇ. 13 ಮತ ಗಳಿಕೆಯೊಂದಿಗೆ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದೆ.
ಮತ ಎಣಿಕೆಯ ಸದ್ಯದ ಟ್ರೆಂಡ್ ಪ್ರಕಾರ ಗುಜರಾತ್ನಲ್ಲಿ ಆಡಳಿತಾರೂಢ ಬಿಜೆಪಿ 158 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ 18, ಎಎಪಿ 7 ಮತ್ತು ಇತರೆ 5 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಒಟ್ಟು 182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್ನಲ್ಲಿ ಅಧಿಕಾರ ರಚನೆಗೆ 92 ಮ್ಯಾಜಿಕ್ ನಂಬರ್ ಬೇಕಿದೆ. ಆದರೆ, ಬಿಜೆಪಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ ಮುಂದೆ ಸಾಗಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. (ಏಜೆನ್ಸೀಸ್)