ಮುಂಬೈ: ಈ ಫೋಟೋದಲ್ಲಿರುವ ಮುದ್ದಾಗಿ ಕಾಣುವ ಮಗು ಯಾರು ಗೊತ್ತಾ? ಈಕೆ ಕನ್ನಡ, ತೆಲುಗು ಸ್ಟಾರ್ ನಟಿ. ಸ್ಯಾಂಡಲ್ವುಡ್ ನಟರ ಜತೆ ತೆರೆ ಹಂಚಿಕೊಂಡ ಖ್ಯಾತ ನಟಿಯಾಗಿದ್ದಾರೆ. ೧೯೮೨ ರಲ್ಲಿ ತಮಿಳು ಚಲನಚಿತ್ರ ನೆಂಜಂಗಲ್‌ನಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು ಮತ್ತು ನಂತರ ವಿವಿಧ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಬೆಳಕು ಚೆಲ್ಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಬಾಲಕೃಷ್ಣ, ಕಮಲ್ ಹಾಸನ್, ರಜನಿಕಾಂತ್, ಮೋಹನ್ ಲಾಲ್ ಮತ್ತು ಇತರ ತಾರೆಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ತೆಲುಗು ಅಲ್ಲದೆ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಜತೆ ಮೈ ಆಟೋಗ್ರಾಫ್, ಸ್ವಾತಿ ಮುತ್ತು ಸಿನಿಮಾದಲ್ಲಿ ಮೀನಾ ನಟಿಸಿದ್ದಾರೆ. ಈ ಎರಡು ಸಿನಿಮಾಗಳೂ ಸೂಪರ್ ಹಿಟ್ ಆಗುವುದರ ಜತೆ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಕನ್ನಡ ಅತ್ಯುತ್ತಮ ನಟಿ ಎನ್ನುವ ಪ್ರಶಸ್ತಿಯನ್ನು ಮೀನಾ ಪಡೆದುಕೊಂಡಿದ್ದಾರೆ.
ಮೈ ಆಟೋಗ್ರಾಫ್, ಗೌಡ್ರು, ಗೇಮ್ ಫಾರ್ ಲವ್, ಸಿಂಹಾದ್ರಿಯ ಸಿಂಹ, ಗ್ರಾಮ ದೇವತೆ, ಶ್ರೀ ಮಂಜುನಾಥ, ಚೆಲುವ, ಪುಟ್ನಂಜ ಸಿನಿಮಾದಲ್ಲಿ ಮೀನಾ ಸ್ಯಾಂಡಲ್ವುಡ್ನ ಸ್ಟಾರ್ ನಟರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ತನ್ನ ಸೌಂದರ್ಯ, ನಟನೆಯಿಂದ ಸಿನಿಪ್ರಿಯರ ಮನ ಸೂರೆಗೊಂಡ ಈ ಸುಂದರ ತಾರೆ ಮದುವೆಯಾದ ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವಿಶೇಷ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಇವರು ಸುಮಾರು 40 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಪ್ರಸ್ತುತ ಬೆಳ್ಳಿತೆರೆ ಹಾಗೂ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ಮೋಹನಾಂಗಿ ಬೇರೆ ಯಾರೂ ಅಲ್ಲ ಹಿರಿಯ ನಾಯಕಿ ಮೀನಾ.
ಸೋಮವಾರ (ಸೆಪ್ಟೆಂಬರ್ 16) ಇಂದು ಮೀನಾ ಅವರ ಹುಟ್ಟುಹಬ್ಬ. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಮೀನಾ ಅವರ ಜನ್ಮದಿನದಂದು ವಿಶ್ ಮಾಡುತ್ತಿದ್ದಾರೆ. ಅಲ್ಲದೆ, ಈ ಸುಂದರ ತಾರೆಯ ಬಾಲ್ಯದ ಅಪರೂಪದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಮೀನಾ 2009 ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಸಾಗರ್ ಕೋವಿಡ್ ಸಮಯದಲ್ಲಿ ನಿಧನರಾದರು. ಈ ದುರಂತದಿಂದ ಚೇತರಿಸಿಕೊಳ್ಳಲು ಮೀನಾ ಬಹಳ ಸಮಯ ತೆಗೆದುಕೊಂಡಳು.ಮೀನಾ ತೆಲುಗು ಮತ್ತು ತಮಿಳು ಸಿನಿಮಾಗಳ ಜೊತೆಗೆ ಕೆಲವು ಟಿವಿ ಶೋಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.