ಜಿಎಸ್​ಟಿ ಪರಿಹಾರದ ಎರಡು ಆಯ್ಕೆ ವಿರುದ್ಧ ಇಂದು ಸಭೆ; ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಿಂದ ವಿರೋಧ

GST 8 dec 19
Published on

ನವದೆಹಲಿ: ರಾಜ್ಯಗಳಿಗೆ ಜಿಎಸ್​ಟಿ ಪಾಲು ಪಾವತಿ ಮಾಡುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಎರಡೂ ಆಯ್ಕೆಗಳಿಗೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಕುರಿತು ಸೋಮವಾರ ಸಭೆ ನಡೆಸಲಿರುವ ರಾಜ್ಯಗಳ ಹಣಕಾಸು ಸಚಿವರು ಮುಂದಿನ ನಡೆ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಕರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳ ಆರ್ಥಿಕ ಸ್ಥಿತಿ ಈಗಾಗಲೇ ಕಷ್ಟದಲ್ಲಿದೆ. ಅನೇಕ ರಾಜ್ಯಗಳು ಈಗಾಗಲೇ ದೊಡ್ಡ ಮೊತ್ತದ ಸಾಲ ಪಡೆದಿವೆ. ಇನ್ನೂ ಸಾಲ ಪಡೆಯುವುದು ಸರಿಯಾದ ಕ್ರಮ ಅಲ್ಲ. ಇದರಿಂದ ರಾಜ್ಯಗಳ ಮೇಲೆ ಹೊರೆಯಾಗುತ್ತದೆ. ನಿಯಮದ ಪ್ರಕಾರ ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಜಿಎಸ್​ಟಿ ಪಾಲನ್ನು ಕೊಡಬೇಕು ಎಂಬುದು ಬಹುತೇಕ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ನಿಲುವಾಗಿದೆ.

ಗುರುವಾರ ನಡೆದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಹಣ ಮರುಪಾವತಿಗೆ ಎರಡು ಆಯ್ಕೆಗಳನ್ನು ರಾಜ್ಯಗಳಿಗೆ ನೀಡಲಾಗಿತ್ತು. ಈ ಆಯ್ಕೆಗಳ ಕುರಿತು ಒಂದು ವಾರದ ಒಳಗಾಗಿ ಅಂತಿಮ ತೀರ್ಮಾನ ತಿಳಿಸುವಂತೆ ರಾಜ್ಯಗಳಿಗೆ ಗಡುವು ನೀಡಲಾಗಿತ್ತು. ಆದರೆ ಎರಡೂ ಆಯ್ಕೆಗಳಿಗೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಬಿಜೆಪಿ ಆಡಳಿತ ರಾಜ್ಯಗಳ ನಿಲುವೇನು?: ಬಿಜೆಪಿ ಆಡಳಿತ ಹೊಂದಿರುವ ಬಹುತೇಕ ರಾಜ್ಯಗಳು ಮೊದಲ ಆಯ್ಕೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ಆರ್ಥಿಕ ಸಂಕಷ್ಟದಲ್ಲಿದೆ. ಅದರ ಮೇಲೆ ಹೆಚ್ಚಿನ ಒತ್ತಡ ಹಾಕುವುದು ಸರಿಯಲ್ಲ. ಪ್ರಸ್ತುತ ಸಂದರ್ಭದಲ್ಲಿ ಭದ್ರತೆಗೆ ಹೆಚ್ಚಿನ ವೆಚ್ಚ ಮಾಡುವ ಅಗತ್ಯವಿದೆ. ಹೀಗಾಗಿ ರಾಜ್ಯಗಳಿಗೆ ಮೊದಲ ಆಯ್ಕೆ ಸೂಕ್ತವಾಗಿದೆ ಎಂದು ಬಿಹಾರದ ಡಿಸಿಎಂ ಸುಶಿಲ್ ಕುಮಾರ್ ಮೋದಿ ತಿಳಿಸಿದ್ದಾರೆ.

ಕೇರಳ ಸರ್ಕಾರ ವಿರೋಧ: ಕೇಂದ್ರ ಸರ್ಕಾರ ನೀಡಿರುವ ಎರಡೂ ಆಯ್ಕೆಗಳನ್ನು ವಿರೋಧಿಸಿ ಪತ್ರ ಬರೆಯಲು ಕೇರಳ ಸರ್ಕಾರ ನಿರ್ಧರಿಸಿದೆ. ಈ ಎರಡೂ ಆಯ್ಕೆಗಳಿಂದ ರಾಜ್ಯ ಸರ್ಕಾರಗಳಿಗೆ ನಷ್ಟವಾಗಲಿದೆ. ಇದರಿಂದ ಕೇಂದ್ರ ಸರ್ಕಾರವೇ ಸಾಲ ಪಡೆದು, ರಾಜ್ಯಗಳ ಜಿಎಸ್​ಟಿ ಪರಿಹಾರವನ್ನು ಭರ್ತಿ ಮಾಡಬೇಕು. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ದೊಡ್ಡದಾಗಿ ಬಿಂಬಿಸುತ್ತಿದೆ. ಜಿಎಸ್​ಟಿ ಸಭೆಯಲ್ಲಿ ಎರಡು ಬಿಜೆಪಿ ರಾಜ್ಯಗಳನ್ನು ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಕೇಂದ್ರ ಸರ್ಕಾರ ಜಿಎಸ್​ಟಿ ಸಭೆಯ ನಿಲುವನ್ನು ಕಡೆಗಣಿಸುತ್ತಿದೆ ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.

ಎರಡು ಪರ್ಯಾಯಗಳು ಆಯ್ಕೆ -1

  • 97 ಸಾವಿರ ಕೋಟಿ ರೂ. ಸಾಲ ಪಡೆಯಲು ರಾಜ್ಯಗಳಿಗೆ ಅವಕಾಶ
  • ತಂಪುಪಾನೀಯ, ವಾಹನ, ತಂಬಾಕು ಪದಾರ್ಥ, ಪಾನ್ ಮಸಾಲಾ ಇನ್ನಿತರ ವಸ್ತುಗಳ ಮೇಲಿನ ಮೇಲ್ತೆರಿಗೆಯಿಂದ ಸಾಲದ ಮೂಲ ಮೊತ್ತ ಮರುಪಾವತಿ
  • ವಿಶೇಷ ಬಡ್ಡಿದರದಲ್ಲಿ ಸಾಲ. ಇದನ್ನು ವಾರ್ಷಿಕ ಬ್ಯಾಲೆನ್ಸ್ ಶೀಟ್​ಗೆ ಸೇರಿಸಲಾಗುವುದಿಲ್ಲ.

ಆಯ್ಕೆ -2

  • ಆದಾಯ ಕೊರತೆಯಾಗಿರುವ 2.35 ಲಕ್ಷ ಕೋಟಿ ರೂ. ಮೊತ್ತವನ್ನು ಮಾರುಕಟ್ಟೆಯಿಂದ ಸಾಲ ಪಡೆಯಲು ಅವಕಾಶ
  • ಮಾರುಕಟ್ಟೆಯ ಬಡ್ಡಿದರದಲ್ಲಿ ಸಾಲ ಪಡೆಯುವ ಕಾರಣ ಇದು ದುಬಾರಿಯಾಗಲಿದೆ
  • ಮೂಲ ಮೊತ್ತ ಮಾತ್ರ ಮೇಲ್ತೆರಿಗೆ ಮೂಲಕ ಪಾವತಿ. ಬಡ್ಡಿಯನ್ನು ರಾಜ್ಯಗಳೇ ಭರಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net