ಸರ್ಕಾರಿ ಬ್ಯಾಂಕ್​ಗಳ ಬೆಳವಣಿಗೆ: ಎಸ್​ಬಿಐ ಹಿಂದಿಕ್ಕಿ ಈ ಬ್ಯಾಂಕ್​ ಮುಂಚೂಣಿಗೆ

bank-holiday
Published on

ನವದೆಹಲಿ: ಹೆಚ್ಚಿನ ಬ್ಯಾಂಕ್‌ಗಳು ಎರಡಂಕಿಯ ಬೆಳವಣಿಗೆಯನ್ನು ಸಾಧಿಸುವಲ್ಲಿ ತೊಂದರೆ ಎದುರಿಸುತ್ತಿರುವ ಸಮಯದಲ್ಲಿಯೇ ಸಾರ್ವಜನಿಕ ವಲಯದ ಸಾಲದಾತ ಆಗಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಒಟ್ಟು ವ್ಯವಹಾರ ಮತ್ತು ಠೇವಣಿ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಕಳೆದ ಹಣಕಾಸು ವರ್ಷದಲ್ಲಿ ಅತ್ಯಧಿಕ ಬೆಳವಣಿಗೆ ದಾಖಲಿಸಿದೆ.

ಪುಣೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಬ್ಯಾಂಕ್​ 2023-24ನೇ ಹಣಕಾಸು ವರ್ಷದಲ್ಲಿ ಒಟ್ಟು ವ್ಯವಹಾರದಲ್ಲಿ (ದೇಶೀಯ) ಶೇಕಡಾ 15.94ರಷ್ಟು ಏರಿಕೆಯನ್ನು ದಾಖಲಿಸಿದೆ. ನಂತರದಲ್ಲಿ ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದ್ದು, ಶೇಕಡಾ 13.12ರಷ್ಟು ಬೆಳವಣಿಗೆ ಸಾಧಿಸಿದೆ.

ಠೇವಣಿ ಕ್ರೋಢೀಕರಣದ ಬೆಳವಣಿಗೆಯ ವಿಷಯದಲ್ಲಿ ಬ್ಯಾಂಕ್​ ಆಫ್​ ಮಹಾರಾಷ್ಟ್ರ ತನ್ನ ಅಗ್ರಸ್ಥಾನ ಕಾಯ್ದುಕೊಳ್ಳುವುದನ್ನು ಮುಂದುವರಿಸಿದೆ. 2023-24ನೇ ಹಣಕಾಸು ವರ್ಷದಲ್ಲಿ ಇದು ಶೇ. 15.66 ರಷ್ಟು ಏರಿಕೆಯಾಗಿದೆ. ಇದರ ನಂತರದಲ್ಲಿ ಎಸ್‌ಬಿಐ (ಶೇ 11.07), ಬ್ಯಾಂಕ್ ಆಫ್ ಇಂಡಿಯಾ (ಶೇ 11.05) ಮತ್ತು ಕೆನರಾ ಬ್ಯಾಂಕ್ (ಶೇ 10.98) ಇವೆ. 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ, ಈ ನಾಲ್ಕು ಸಾಲದಾತರು ಮಾತ್ರ 2023-24ರ ಹಣಕಾಸು ವರ್ಷದಲ್ಲಿ ಠೇವಣಿಗಳಲ್ಲಿ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿದ್ದಾರೆ.

ಸಾಲದ ಬೆಳವಣಿಗೆಗೆ ಸಂಬಂಧಿಸಿದಂತೆ, ಕೋಲ್ಕತ್ತಾ ಮೂಲದ ಯುಕೊ ಬ್ಯಾಂಕ್ ಶೇಕಡಾ 16.38ರಷ್ಟು ಬೆಳವಣಿಗೆ ಸಾಧಿಸಿದೆ. ನಂತರದಲ್ಲಿ ಬ್ಯಾಂಕ್​ ಆಫ್​ ಮಹಾರಾಷ್ಟ್ರ (ಶೇ. 16.30), ಎಸ್​ಬಿಐ (ಶೇ. 16.26) ಬೆಳವಣಿಗೆಯನ್ನು ವರದಿ ಮಾಡಿವೆ. ಉಳಿದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಾಲದ ಬೆಳವಣಿಗೆಯು ಈ ಹಣಕಾಸು ವರ್ಷದಲ್ಲಿ 16 ಪ್ರತಿಶತಕ್ಕಿಂತ ಕಡಿಮೆಯಾಗಿದೆ.

ಮಾರ್ಚ್ 31, 2024 ರಂತೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಎಸ್​ಬಿಐ ಅನುಕ್ರಮವಾಗಿ ಶೇಕಡಾ 1.88 ಮತ್ತು ಶೇಕಡಾ 2.24 ರಷ್ಟು ಕಡಿಮೆ ಒಟ್ಟು ಅನುತ್ಪಾದಕ ಆಸ್ತಿಗಳನ್ನು (ಎನ್​ಪಿಎ) ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net