

ಹೈದರಾಬಾದ್: ನಟಿ ಅನುಷ್ಕಾ ಶೆಟ್ಟಿಯ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೆಲುಗು ಮತ್ತು ತಮಿಳು ಚಿತ್ರರಂಗದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನಟಿಸದಿದ್ದರೂ ಕರ್ನಾಟಕವೇ ಅನುಷ್ಕಾ ತವರೂರು ಆಗಿರುವುದರಿಂದ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ತೆಲುಗಿನಲ್ಲಿ ಲೇಡಿ ಓರಿಯೆಂಟೆಡ್ ಸಿನಿಮಾಗಳ ಮೂಲಕ ಉತ್ತಮ ಹೆಸರು ಗಳಿಸಿದ್ದಾರೆ. ಅದರಲ್ಲೂ ಬಾಹುಬಲಿ ಸಿನಿಮಾ ಬಂದ ಮೇಲಂತೂ ಇಡೀ ಜಗತ್ತಿಗೆ ಅನುಷ್ಕಾ ಪರಿಚಯವಿದೆ.
ಅನುಷ್ಕಾ ಈಗ ತಮ್ಮ ವೃತ್ತಿಜೀವನದ ಬಗ್ಗೆ ಯೋಚಿಸಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅನುಷ್ಕಾ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದರು. ಅನುಷ್ಕಾರ ಮುಂದಿನ ಪ್ರಾಜೆಕ್ಟ್‌ಗಳು ಯಾವುವು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಅಂದಹಾಗೆ ಅನುಷ್ಕಾ ಅವರು ಸಿನಿಮಾ ವಿಚಾರಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಜೀವನದ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಅದೇನೆಂದರೆ ಅನುಷ್ಕಾ ಮದುವೆ ಯಾವಾಗ? ಎಂಬ ಪ್ರಶ್ನೆಗೆ ಆಗಾಗ ಕೇಳಿಬರುತ್ತಲೇ ಇದೆ. ವಯಸ್ಸು 42 ಆದರೂ ಅನುಷ್ಕಾ ಇನ್ನೂ ಏಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಮತ್ತೆ ಆ ವಿಷಯ ಚರ್ಚೆಗೆ ಬಂದಿದ್ದು, ಅನುಷ್ಕಾ ಮದುವೆ ಫಿಕ್ಸ್ ಆಗಿದೆ ಎಂಬ ವರದಿಗಳು ಹರಿದಾಡುತ್ತಿವೆ.
ಅನುಷ್ಕಾಗೆ ವರ ರೆಡಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅನುಷ್ಕಾಗೆ ವಯಸ್ಸಾಗಿರುವುದರಿಂದ ಆದಷ್ಟು ಬೇಗ ಮದುವೆ ಮಾಡಲು ಕುಟುಂಬಸ್ಥರು ಸಂಬಂಧಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಅದರ ಭಾಗವಾಗಿ ಉದ್ಯಮಿಯೊಬ್ಬರ ಸಂಬಂಧವನ್ನು ಮನೆಯವರು ಇಷ್ಟಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ಯಮಿ ಕೂಡ ಅನುಷ್ಕಾರನ್ನು ಮದುವೆಯಾಗಲು ಸಿದ್ಧರಾಗಿದ್ದಾರಂತೆ. ಆದರೆ, ಸ್ವೀಟಿಯಿಂದ ಇನ್ನೂ ಗ್ರೀನ್ ಸಿಗ್ನಲ್ ಬಂದಿಲ್ಲ ಎನ್ನಲಾಗುತ್ತಿದೆ.
ಏನಾದರೂ ಅನುಷ್ಕಾ ಗ್ರೀನ್ ಸಿಗ್ನಲ್ ಕೊಟ್ಟರೆ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಗಳಿವೆ. ಆದರೆ ಆ ಉದ್ಯಮಿ ಯಾರು? ಇದೆಲ್ಲ ನಿಜವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಅಧಿಕೃತ ಘೋಷಣೆಯಾಗುವವರೆಗೂ ಉತ್ತರ ಸಿಗುವುದಿಲ್ಲ. ಸದ್ಯಕ್ಕೆ ಇದೊಂದು ವದಂತಿ ಎಂದು ಹೇಳಬಹುದಷ್ಟೇ. (ಏಜೆನ್ಸೀಸ್)