

ನವದೆಹಲಿ: ದೇಶದಲ್ಲಿ ದಿನೇದಿನೆ ಕೋವಿಡ್19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನೆಲ್ಲ ಕೋವಿಡ್-19 ಟೆಸ್ಟ್ಗೆ ಒಳಪಡಿಸಿ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ವ್ಯಾಪಾರಿಗಳು ಕೋವಿಡ್ ಸೋಂಕು ಹರಡುವ ಸಂಭಾವ್ಯರಾಗಿರುವ ಕಾರಣ ಈ ಟೆಸ್ಟ್ ಮಾಡಿಸಬೇಕು ಎಂದು ಅದು ನಿರ್ದೇಶಿಸಿದೆ.
ಈ ಸಂಬಂಧ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿರುವ ಆರೋಗ್ಯ ಸಚಿವಾಲಯದ ಸೆಕ್ರೆಟರಿ ರಾಜೇಶ್ ಭೂಷಣ್, ಕೋವಿಡ್ ಸೋಂಕಿತರನ್ನು ಕರೆದೊಯ್ಯಲು ಅನುಕೂಲವಾಗುವಂತೆ ಸುಸಜ್ಜಿತವಾದ ಆ್ಯಂಬುಲೆನ್ಸ್ ಸೌಲಭ್ಯವನ್ನೂ ಖಾತರಿಗೊಳಿಸಬೇಕು. ತುರ್ತುಕರೆಗಳಿಗೆ ತಕ್ಷಣವೇ ಸ್ಪಂದಿಸುವಂತೆಯೂ ಸೂಚಿಸಿದ್ದಾರೆ.
ಕೋವಿಡ್ 19 ಈಗ ಹೊಸ ಪ್ರದೇಶಗಳಿಗೆ ಹರಡುತ್ತಿದ್ದು, ಆರಂಭದಲ್ಲೇ ಪತ್ತೆ ಹಚ್ಚಿ ಅಂಥ ಸೋಂಕಿತರನ್ನು ಹೋಮ್ ಐಸೋಲೇಷನ್ಗೆ ಒಳಪಡಿಸಬೇಕು. ಇನ್ಫ್ಲುಯೆನ್ಝಾ ಲೈಕ್ ಇಲ್ನೆಸ್ ಅಥವಾ ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಇಲ್ನೆಸ್ ಗಳ ರೋಗ ಲಕ್ಷಣಗಳೂ ಕೋವಿಡ್ ಮಾದರಿಯಲ್ಲೇ ಇರುವ ಕಾರಣ ಈ ಬಗ್ಗೆ ನಿಗಾವಹಿಸಬೇಕು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನ ಒಂದರ ಸರಾಸರಿ 30 ಜನರ ಸಂಪರ್ಕಿಸುತ್ತಾನೆ. ಸೋಂಕಿತರ ವಿಚಾರದಲ್ಲಿ ಇದನ್ನು ಗಮನಿಸಬೇಕು.
ಇಂಡಸ್ಟ್ರಿಯಲ್ ಕ್ಲಸ್ಟರ್ಗಳು, ಕೊಳಚೆ ಪ್ರದೇಶ, ಕಾರಾಗೃಹ, ವೃದ್ಧಾಶ್ರಮ, ಅನಾಥಾಶ್ರಮ ಮುಂತಾದವುಗಳು ಕೋವಿಡ್ ಸುಲಭವಾಗಿ ಹರಡಬಲ್ಲವು. ಹೀಗಾಗಿ ಅಲ್ಲಿ ಹೆಚ್ಚಿನ ನಿಗಾ ಇರಬೇಕು. ಇದಕ್ಕೆ ಹೊರತಾಗಿ, ದಿನಸಿ ಅಂಗಡಿ, ತರಕಾರಿ ವ್ಯಾಪಾರಿ ಮುಂತಾದವರನ್ನು ಸಂಭಾವ್ಯ ಸೋಂಕು ಹರಡುವವರನ್ನಾಗಿ ಪರಿಗಣಿಸಿ ಕೋವಿಡ್ 19 ಟೆಸ್ಟ್ಗೆ ಒಳಪಡಿಸಬೇಕು ಎಂದು ಸೂಚಿಸಿದ್ದಾರೆ. (ಏಜೆನ್ಸೀಸ್)