ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಹಾಗೂ ಹೊಸ ಆಡಳಿತ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ರೂಪಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ – 2024 (ಜಿಬಿಜಿಎ) ಅಡಿಯಲ್ಲಿ ಅಧಿನಿಯಮಗಳ ಜಾರಿ ಗುರುವಾರದಿಂದ (ಮೇ 15) ಅಧಿಕೃತಗೊಳ್ಳಲಿದೆ. ಈ ಮೂಲಕ 15 ವರ್ಷಗಳ ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡಿದ್ದು, ಗ್ರೇಟರ್ ಬೆಂಗಳೂರು ಸ್ವರೂಪದಲ್ಲಿ ನೂತನ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಗ್ರೇಟರ್ ಬೆಂಗಳೂರು ಅಧಿಕೃತವಾಗಿ ಅನುಷ್ಠಾನಕ್ಕೆ ತರಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ತುಷಾರ್ ಗಿರಿನಾಥ್ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ದೈನಂದಿನ ಆಡಳಿತವನ್ನು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಮುನ್ನಡೆಸಲಿದ್ದಾರೆ. ಗ್ರೇಟರ್ ಬೆಂಗಳೂರು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲು 4 ತಿಂಗಳು ಬೇಕಾಗಿದ್ದು, ಅಲ್ಲಿಯವರೆಗೂ ಹಾಲಿ ಬಿಬಿಎಂಪಿ ವ್ಯವಸ್ಥೆಯೇ ಮುಂದುವರಿಯಲಿದೆ.
ಜನರ ಸೇವೆ ಹೇಗೆ?:
ಹೊಸ ವ್ಯವಸ್ಥೆಯಿಂದಾಗಿ ಪಾಲಿಕೆ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯಾಗದು. ಜನರಿಗೆ ಪಾಲಿಕೆಯಿಂದ ಸಿಗುವ ನಾಗರಿಕ ಸೌಲಭ್ಯ ಹಾಗೂ ಸೇವೆ ಎಂದಿನಂತೆ ಲಭ್ಯವಿರಲಿದೆ. ಪಾಲಿಕೆ ಆಡಳಿತದ ಜತೆ ಜತೆಗೆ ಗ್ರೇಟರ್ ಬೆಂಗಳೂರು ರೂಪುಗೊಳ್ಳಲು ಬೇಕಾದ ಎಲ್ಲ ಕಾರ್ಯಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಜಿಎ ಕಾಯ್ದೆ ಅನ್ವಯ ಬಿಬಿಎಂಪಿ ವ್ಯಾಪ್ತಿ (ಗಡಿ) ಹಿಗ್ಗಿಸಿಕೊಳ್ಳಲು ಅವಕಾಶವಿದ್ದು, ಮೊದಲ ಹಂತದಲ್ಲಿ ಹಾಲಿ ಬಿಬಿಎಂಪಿ ವ್ಯಾಪ್ತಿಯನ್ನೇ ಗ್ರೇಟರ್ ಬೆಂಗಳೂರು ಪ್ರದೇಶವಾಗಿ (ಜಿಬಿಎ) ಗುರುತಿಸಲಾಗಿದೆ. ಅಂದರೆ ಬಿಬಿಎಂಪಿಯ ಹಾಲಿ 225 ವಾರ್ಡ್ ವ್ಯಾಪ್ತಿಗೆ ಹೊಸ ವ್ಯವಸ್ಥೆ ಅನ್ವಯವಾಗಲಿದೆ.
ಗ್ರೇಟರ್ ರಚನೆಗೆ 4 ತಿಂಗಳ ಗಡುವು:
ಸರ್ಕಾರ ಹೊರಡಿಸಿರುವ ಅಧಿನಿಯಮ ಅನ್ವಯ ಮುಂದಿನ 4 ತಿಂಗಳಲ್ಲಿ ಗ್ರೇಟರ್ ಬೆಂಗಳೂರು ವ್ಯವಸ್ಥೆಯನ್ನು ಪೂರ್ಣವಾಗಿ ಅಸ್ತಿತ್ವಕ್ಕೆ ತರಲು ಗಡುವು ವಿಧಿಸಲಾಗಿದೆ. ಅಷ್ಟರೊಳಗೆ ಹೊಸ ಪಾಲಿಕೆಗಳ ರಚನೆ, ವ್ಯಾಪ್ತಿ, ಗಡಿ, ಸಂಪನ್ಮೂಲ ಕ್ರೋಡೀಕರಣ, ಆಡಳಿತ ವ್ಯವಸ್ಥೆ, ಚುನಾವಣೆ ಇತ್ಯಾದಿ ಅಂಶ ಒಳಗೊಂಡ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಈ ಕಾರ್ಯ ಪೂರ್ಣವಾಗುತ್ತಿದ್ದಂತೆ ಸಿಎಂ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಲಿದೆ. ಆ ಪ್ರಾಧಿಕಾರವೇ ಎಲ್ಲ ನೀತಿ ನಿರೂಪಣೆ ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರದಾನ ವೇದಿಕೆಯಾಗಲಿದೆ.
ಶೀಘ್ರ ಸಮಿತಿ ರಚನೆ:
ಹೊಸ ಪಾಲಿಕೆಗಳನ್ನು ರಚಿಸಲು ಅನುಕೂಲವಾಗುವಂತೆ ಅಧಿಕಾರಿಗಳು, ತಜ್ಞರು ಒಳಗೊಂಡ ಸಮಿತಿಯನ್ನು ಸರ್ಕಾರ ಶೀಘ್ರವೇ ರಚಿಸಲಿದೆ. ಆನಂತರ ಸಮಿತಿಯು ಜಿಬಿಜಿಎ ಕಾಯ್ದೆ ಅನ್ವಯ ತನ್ನ ಕಾರ್ಯವನ್ನು ಕೈಗೊಂಡು ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸಲಿದೆ. ಇದರ ಜತೆಗೆ ಹೊಸ ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಂಬಂಧ ವಾರ್ಡ್ ವಿಂಗಡಣೆ, ಮೀಸಲು ನಿಗದಿ ಸಹಿತ ಎಲೆಕ್ಷನ್ ಪ್ರಕ್ರಿಯೆಗೆ ಬೇಕಾದ ಕಾನೂನು ನೀತಿಯನ್ನು ಪ್ರತ್ಯೇಕವಾದ ಸಮಿತಿ/ಆಯೋಗ ರೂಪಿಸಲಿದೆ. ಈ ಎಲ್ಲ ಕಾರ್ಯದ ಜತೆಗೆ ಪ್ರಾಧಿಕಾರ ರಚನೆಯಾದ ಬಳಿಕ ಪೂರ್ಣ ಪ್ರಮಾಣದ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ತರಲು ಸರ್ಕಾರ ಆಲೋಚನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಗ್ರೇಟರ್ ಬೆಂಗಳೂರು ಏಕೆ?:
ಬಿಬಿಎಂಪಿ ವ್ಯವಸ್ಥೆಯಡಿ ನಗರ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಕೈಗೊಳ್ಳ,ಲು ಸಾಧ್ಯವಾಗದ ಕಾರಣ ರಾಜಧಾನಿಯ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡ ಹೊಸ ಆಡಳಿತ ವ್ಯವಸ್ಥೆ ತರಲು ’ಗ್ರೇಟರ್ ಬೆಂಗಳೂರು’ಅನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಕಳೆದ ವರ್ಷ ಘೋಷಣೆಯಾದ ಈ ವ್ಯವಸ್ಥೆಗೆ ಕಳೆದ ಮಾ.1ರಂದು ವಿಧಾನಮಂಡಲವು ‘ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ – 2024’ಕ್ಕೆ ಒಪ್ಪಿಗೆ ನೀಡಿತು. ನಂತರ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿದಾಗ ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದೆ ಎಂಬ ದೂರು ದಾಖಲಾಗಿತ್ತು. ಇದರ ಸ್ಪಷ್ಟೀಕರಣಕ್ಕಾಗಿ ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿತ್ತು. ಇದಕ್ಕೆ ಸರ್ಕಾರ ಸ್ಪಷ್ಟನೆಯನ್ನು ರವಾನಿಸಿ ವಿಧೇಯಕಕ್ಕೆ ಅಂಕಿತ ಹಾಕಲು ಕೋರಲಾಗಿತ್ತು. ಏ.24ರಂದು ಮಸೂದೆಗೆ ಅಂಕಿತ ಹಾಕುತ್ತಿದ್ದಂತೆ ಸರ್ಕಾರವು ಅಂದೇ ಕಾಯ್ದೆಯನ್ನು ಅಧಿಸೂಚಿಸಿ ರಾಜ್ಯಪತ್ರ ಹೊರಡಿಸಿತು. ಈಗ ಗ್ರೇಟರ್ ಬೆಂಗಳೂರು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.