ಗೋಡೆ ಜತೆಗೆ ಮಾತಾಡೋ ಅಜ್ಜಿ... ‘ಮರೆತು ಹೋದವರು’ದಲ್ಲೊಂದು ನೆನಪಿನಲ್ಲಿ ಉಳಿಯುವ ಟ್ರಾಕ್

maretu hodavaru
Published on

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ಪ್ರಯೋಗಗಳು ಸದ್ದಿಲ್ಲದೆ ಆಗುತ್ತಿರುತ್ತವೆ. ಅಂಥದ್ದೇ ಒಂದು ಪ್ರಯೋಗ ಇತ್ತೀಚೆಗೆ ‘ಮರೆತು ಹೋದವರು’ ಎಂಬ ಧಾರಾವಾಹಿಯಲ್ಲಾಗಿದೆ. ಸಿರಿಕನ್ನಡ ಚಾನಲ್​ನಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ‘ಗೋಡೆ ಜತೆಗೆ ಮಾತಾಡೋ ಅಜ್ಜಿ’ಯ ಟ್ರಾಕ್ ಸಾಕಷ್ಟು ಜನಪ್ರಿಯವಾಗಿದ್ದು, ಜನರಿಂದ ಮೆಚ್ಚುಗೆ ಪಡೆದಿದೆ.

ಇಲ್ಲಿ ನಾಯಕಿ ತನ್ನ ಮದುವೆ ನೆಂಟರೆಲ್ಲರ ಸಮ್ಮುಖದಲ್ಲಿ ನಡೆಯಬೇಕೆಂದು ಆಸೆ ಪಡುತ್ತಾಳೆ. ಆದರೆ, ಅವಳಿಗೆ ನೆಂಟರು ಇರುವುದಿಲ್ಲ. ಇಗೋ ಸಮಸ್ಯೆಯಿಂದ ಎಲ್ಲರೂ ದೂರ ಆಗಿರುತ್ತಾರೆ. ಅವಳ ಅಜ್ಜ-ಅಜ್ಜಿ ಒಂದೇ ಮನೆಯಲ್ಲಿದ್ದರೂ ಎಷ್ಟೋ ವರ್ಷಗಳಿಂದ ಮಾತಾಡಿರುವುದಿಲ್ಲ. ಈ ಪೈಕಿ ಅಜ್ಜಿ ಗೋಡೆಯ ಜತೆಗೆ ಮಾತಾಡುತ್ತಿದ್ದರೆ, ಅಜ್ಜ ತನ್ನದೇ ಪ್ರಪಂಚದಲ್ಲಿ ಕಳೆದು ಹೋಗಿರುತ್ತಾನೆ. ಅಜ್ಜನ ಜತೆಗೆ ಅಜ್ಜಿ ಮಾತನಾಡಬೇಕು ಎಂದರೂ, ನೇರವಾಗಿ ಮಾತನಾಡುವುದಿಲ್ಲ. ಗೋಡೆಗೆ ಹೇಳುತ್ತಾಳೆ. ಅಜ್ಜಿಗೆ ಗೋಡೆ ಒಂದು ಸಂವಹನ ಮಾಧ್ಯಮ. ಆಕೆ ಗೋಡೆಯನ್ನು ಬಯ್ಯುತ್ತಾಳೆ, ಪ್ರೀತಿಸುತ್ತಾಳೆ. ಆ ಗೋಡೆಯೇ ಆಕೆಗೆ ಎಲ್ಲವೂ ಆಗಿರುತ್ತದೆ. ಅಜ್ಜಿಯಾಗಿ ಹಿರಿಯ ನಟಿ ಲಕ್ಷ್ಮೀ ನಾಡಗೌಡ ಕಾಣಿಸಿಕೊಂಡಿದ್ದು, ಅಜ್ಜನಾಗಿ ಜಗದೀಶ್ ಮಲ್ನಾಡ್ ನಟಿಸಿದ್ದಾರೆ.

ಈ ಟ್ರಾಕ್ ಕುರಿತು ಮಾತನಾಡುವ ನಿರ್ದೇಶಕ ಬಿ. ಮಧುಸೂಧನ್, ‘ಈ ಟ್ರಾಕ್​ನ್ನು ನಾವು ಪತ್ರಕರ್ತೆ ಭಾರತಿ ಹೆಗಡೆ ಅವರ ‘ಸೀತಾಳೆ ದಂಡೆಯ ಕಥೆಗಳು’ ಎಂಬ ಕಥಾಸಂಕಲನದ ಒಂದು ಕಥೆಯಿಂದ ಸ್ಪೂರ್ತಿ ಪಡೆದು ಬಳಸಿಕೊಂಡಿದ್ದೇವೆ. ಅಜ್ಜಿ ತನ್ನ ಒಂಟಿತನವನ್ನು ನೀಗಿಸಿಕೊಳ್ಳುವುದಕ್ಕೆ ಗೋಡೆಯನ್ನು ಹೇಗೆ ಬಳಸಿಕೊಳ್ಳುತ್ತಾರೆ, ಅದರ ಜತೆಗೆ ತನ್ನ ಭಾವನೆಗಳನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದು ಅದರ ಸಾರಾಂಶ. ಈ ವಿಷಯ ಮೊಮ್ಮಗಳಿಗೆ ಗೊತ್ತಾಗಿ, ಸಮಸ್ಯೆಯನ್ನು ಬಗೆಹರಿಸುತ್ತಾಳೆ. ಈ ಸಮಸ್ಯೆಯಿಂದ ಆಚೆ ಬರುವ ಅಜ್ಜಿ ಮತ್ತೆ ಮೊದಲಿನಂತಾಗುತ್ತಾರೆ’ ಎನ್ನುತ್ತಾರೆ.

‘ಮರೆತು ಹೋದವರು’ ಧಾರಾವಾಹಿಗೆ ಭಾರತಿ ಹೆಗಡೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಸಲೊಮಿ ಡಿಸೋಜ, ಬೃಂದಾ ಕಶ್ಯಪ್, ರಾಜ್ ಅರಸ್, ಲಕ್ಷ್ಮೀ ನಾಡಗೌಡ, ಜಗದೀಶ್ ಮಲ್ನಾಡ್ ಮುಂತಾದವರು ನಟಿಸುತ್ತಿರುವ ಈ ಧಾರಾವಾಹಿಯು ಸರಿಕನ್ನಡದಲ್ಲಿ ಪ್ರತಿ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net