ನಾನು ಬಿಗ್​ಬಾಸ್​ಗೆ ಹೋಗ್ತಿಲ್ಲ: ನಟ ಅನಿರುದ್ಧ್​

Anirudh
Published on

ಬೆಂಗಳೂರು: ಬಿಗ್​ಬಾಸ್​ ಕನ್ನಡದ ಒಟಿಟಿ ಮೊದಲ ಸೀಸನ್​ ಮುಗಿಯುತ್ತಾ ಬಂದಿದ್ದು, ಬಿಗ್​ಬಾಸ್ 9ನೇ ಸೀಸನ್​ಗೆ ಭಾರೀ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಬಿಗ್​ಬಾಸ್ 9ನೇ ಸೀಸನ್​ಗೆ ನಟ ಅನಿರುದ್ಧ್​ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯಿಂದ ನಾಯಕ ಅನಿರುದ್ಧ್​ ಹೊರಬಂದ ಬೆನ್ನಲ್ಲೇ ಬಿಗ್​ಬಾಸ್​ಗೆ ಅನಿರುದ್ಧ್​ ಹೋಗ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಇದೀಗ ಈ ಕುರಿತು ಸ್ವತಃ ಅನಿರುದ್ಧ್​ ಅವರೇ ಪ್ರತಿಕ್ರಿಯಿಸಿದ್ದಾರೆ.

'ನಾನು ಬಿಗ್​ಬಾಸ್​ಗೆ ಹೋಗುತ್ತಿಲ್ಲ' ಎಂದು ಅನಿರುದ್ಧ್​ ಅವರು ಟ್ವೀಟ್​ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಾಯಕನ ಪಾತ್ರ ಆರ್ಯವರ್ಧನ್​ ಆಗಿ ನಟಿಸಿರುವ ಅನಿರುದ್ಧ್​ಗೆ ಸಿನಿಮಾಗಳಿಗಿಂತ ಈ ಧಾರಾವಾಹಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ಕಳೆದ ತಿಂಗಳು ಈ ಸೀರಿಯಲ್ ತಂಡದಲ್ಲಿ ಉಂಟಾದ ಮನಸ್ತಾಪದಿಂದಾಗಿ ​ಅನಿರುದ್ಧ್​ ಅವರನ್ನು ಕೈಬಿಡಲಾಗಿದೆ. ಅಷ್ಟೇ ಅಲ್ಲ, ಕನ್ನಡ ಕಿರುತೆರೆಯಿಂದಲೇ ಅನಿರುದ್ಧ್​ ಅವರನ್ನು 2 ವರ್ಷ ಬ್ಯಾನ್​ ಮಾಡಲಾಗಿದೆ ಎಂಬ ಸುದ್ದಿಯೂ ಆ ವೇಳೆ ಹರಿದಾಡಿತ್ತು. ಅಂತಿಮವಾಗಿ ಧಾರಾವಾಹಿಯಿಂದ ಅನಿರುದ್ಧ್​ ಹೊರಬರುವ ಮೂಲಕ ವಿವಾದಕ್ಕೆ ಇತಿಶ್ರೀ ಹೇಳಲಾಗಿದೆ.

ಆದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅನಿರುದ್ಧ್​ ಪರ ಧ್ವನಿ ಎತ್ತಿದ್ದರು. ಅನಿರುದ್ಧ್​ ಇಲ್ಲದ ಧಾರಾವಾಹಿಯನ್ನು ನಾವು ನೋಡಲ್ಲ, ಅನಿರುದ್ಧ್​ ಅವರನ್ನ ವಾಪಸ್​ ಕರೆದುಕೊಳ್ಳಿ ಎಂದು ಅಭಿಯಾನ ಕೂಡ ಮಾಡಿದ್ದರು. ಇದೀಗ ಬಿಗ್​ಬಾಸ್​ಗೆ ಅನಿರುದ್ಧ್​ ಹೋಗ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಅವರ ಅಭಿಮಾನಿಗಳು ಖುಷಿಯಿಂದ ಶುಭಕೋರುತ್ತಲೇ ಇದ್ದರು. ಆದರೆ, ಇದನ್ನು ಅಲ್ಲಗೆಳೆದಿರುವ ಅನಿರುದ್ಧ್​, ನಾನು ಬಿಗ್​ಬಾಸ್​ಗೆ ಹೋಗುತ್ತಿಲ್ಲ. ನಾನು ಸಾಮಾಜಿಕ ಕೆಲಸ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net