ಒಂದು ವರ್ಷದಿಂದ ನಡೆದಿಲ್ಲ ಗ್ರಾಮಸಭೆ: ಬಳ್ಕುಂಜೆ ಗ್ರಾಮಸ್ಥರ ಅಸಮಾಧಾನ

Kin_Balkunje
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಗ್ರಾಮಸಭೆ ಪ್ರತಿ ಆರು ತಿಂಗಳಿಗೊಮ್ಮೆ ನಡೆಯಬೇಕು, ಆದರೆ ಬಳ್ಕುಂಜೆ ಗ್ರಾಮಸಭೆ ನಡೆಯದೆ ಒಂದು ವರ್ಷಗಳಾಗುತ್ತಾ ಬಂತು ಎಂದು ಗ್ರಾಮಸ್ಥ ನೆಲ್ಸನ್ ಲೋಬೋ ಅಸಮಾಧಾನ ವ್ಯಕ್ತಪಡಿಸಿದರು.

ಬಳ್ಕುಂಜೆ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಮಮತಾ ಪೂಂಜ ಅಧ್ಯಕ್ಷತೆಯಲ್ಲಿ ಗ್ರಾಪಂನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ನಡೆಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧಿಕಾರಿ, ಚುನಾವಣೆ ಸಹಿತ ಅನೇಕ ಕಾರಣಗಳಿಂದ ಗ್ರಾಮಸಭೆ ನಡೆದಿಲ್ಲ ಎಂದರು.

ಪಂಚಾಯಿತಿ ವ್ಯಾಪ್ತಿಯ ಮುಗ್ಗೇರ ಬೈಲು ಬಳಿ ಮಳೆಗಾಲದಲ್ಲಿ ಪ್ರವಾಹ ಉಂಟಾದಾಗ ಯಾವೊಬ್ಬ ಜನಪ್ರತಿನಿಧಿ ಬಂದಿಲ್ಲ ಎಂದು ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜ ಉತ್ತರಿಸಿ, ನೆರೆ ಬಂದ ದಿನ ನಾವು ಸ್ಥಳೀಯ ಗ್ರಾಮಸ್ಥರ ಜತೆ ಸಂಪರ್ಕದಲ್ಲಿದ್ದು, ಆದಷ್ಟು ಪರಿಹಾರ ಕಲ್ಪಿಸಿದ್ದೇವೆ. ಸುಮ್ಮನೆ ದೂರುವುದು ಸರಿಯಲ್ಲ ಎಂದರು.

ಬಳ್ಕುಂಜೆ ಪಲಿವಾರು ಸಂಪರ್ಕ ಸೇತುವೆ ದುರಸ್ತಿ ಅಥವಾ ಹೊಸ ಸೇತುವೆ ನಿರ್ವಾಣದ ಬಗ್ಗೆ ಏನಾಯ್ತು? ಎಂದು ಗ್ರಾಮಸ್ಥರ ಪ್ರಶ್ನೆಗೆ ಸದಸ್ಯ ದಿನೇಶ್ ಪುತ್ರನ್ ಉತ್ತರಿಸಿ, ಈ ಬಗ್ಗೆ ಸಂಬಂಧಪಟ್ಟ ಇಲಾಖೆೆಯ ಗಮನ ಸೆಳೆಯಲಾಗಿದ್ದು ಮಂಗಳೂರಿನಿಂದ ಬಂದ ಇಂಜಿನಿಯರ್‌ಗಳ ತಂಡ ಸೇತುವೆ ಧಾರಣಾ ಸಾಮರ್ಥ್ಯ ಪರಿಶೀಲನೆ ನಡೆಸಿದ್ದಾರೆ. ನೂತನ ಸೇತುವೆ ನಿರ್ವಾಣಕ್ಕೆ 24 ಕೋಟಿ ರೂ. ವೆಚ್ಚ ತಗಲಲ್ಲಿದ್ದು ಇದ್ದ ಸೇತುವೆ ದುರಸ್ತಿ ಕಾರ್ಯಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಸವಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶುಭಾ ನಾಯಕ್ ನೋಡಲ್ ಅಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಅಭಿವದ್ಧಿ ಅಧಿಕಾರಿ ಜಗದೀಶ್ ಎಸ್., ಕಾರ್ಯದರ್ಶಿ ರೋಬರ್ಟ್ ಫ್ರಾನ್ಸಿಸ್ ಫರ್ನಾಂಡಿಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಅಪಾಯಕಾರಿ ಮರಗಳ ತೆರವಿಗೆ ಆಗ್ರಹ

ಪಂಚಾಯಿತಿ ವ್ಯಾಪ್ತಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಸಹಕಾರ ಬೇಕು. ಬಳ್ಕುಂಜೆ ಹೊಸ ಮನೆ ಬಳಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ ಹಾಗೂ ಕಷಿ ಹಾನಿಯಾಗಿದೆ ಎಂದು ಗ್ರಾಮಸ್ಥರೊಬ್ಬರು ದೂರಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net