ಕಾಸರಗೋಡು: ಮಧೂರು ಸಮೀಪ ರಸ್ತೆ ಬಳಿ ಕನ್ನಡ ಭಾಷೆಗೆ ಅಪಚಾರವಾಗುವ ರೀತಿಯಲ್ಲಿದ್ದ ಅಪಾಯದ ಸೂಚನಾ ಫಲಕವನ್ನು ಕೊನೆಗೂ ಸರಿಪಡಿಸಿ ಅಳವಡಿಸಲಾಗಿದೆ.
ಜಿಲ್ಲೆಯ ಅಚ್ಚಗನ್ನಡ ಪ್ರದೇಶಗಳಲ್ಲೂ ಕನ್ನಡ ಭಾಷೆ ಬಳಕೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ವ್ಯಾಪಕ ನಿರ್ಲಕ್ಷೃ ವಹಿಸುತ್ತಾ ಬರುತ್ತಿರುವ ನಡುವೆ, ಮಧೂರು ರಸ್ತೆಬದಿ ಅಪಾರ್ಥವಾಗುವ ರೀತಿ ಕನ್ನಡ ಭಾಷೆಯಲ್ಲಿ ಸೂಚನಾ ಫಲಕ ಅಳವಡಿಸಲಾಗಿದ್ದು, ಈ ಬಗ್ಗೆ ಕನ್ನಡಿಗರಿಂದ ಭಾರಿ ಅಸಮಾಧಾನ ವ್ಯಕ್ತವಾಗಿತ್ತು.
ಕನ್ನಡ ಭಾಷೆಯನ್ನು ವಿಕೃತಗೊಳಿಸಿ ಸೂಚನಾ ಫಲಕ ಅಳವಡಿಸಿರುವ ಬಗ್ಗೆ ‘ವಿಜಯವಾಣಿ’ ವಿಶೇಷ ವರದಿ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಸೂಚನಾ ಫಲಕ ಸರಿಪಡಿಸಿ, ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಧ್ಯ ಪ್ರವೇಶಿಸಿ ಸೂಚನಾಫಲಕ ಸರಿಪಡಿಸಿರುವ ಕ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.