

ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಮುಂದುವರಿದ ಫಲವಾಗಿ ಅವಕಾಶಗಳ ಸೃಷ್ಟಿಯ ಜತೆ ಅನೇಕ ಸವಾಲುಗಳೂ ಎದುರಾಗುತ್ತಿವೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ ಹೇಳಿದರು.
ಕೊಣಾಜೆ ನಡುಪದವಿನ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಪದವಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣಕ್ಕೆ ವ್ಯಕ್ತಿಯ ಭವಿಷ್ಯ ರೂಪಿಸುವ ಶಕ್ತಿ ಇರುವುದರಿಂದ ಪದವಿಗೆ ಮಾತ್ರ ಸೀಮಿತವಾಗಬಾರದು. ಉತ್ತಮ ಮೌಲ್ಯಯುತ ಶಿಕ್ಷಣ, ಪರಿಶ್ರಮ ಹಾಗೂ ಮಾನವೀಯತೆಯೊಂದಿಗೆ ಮುನ್ನಡೆದು ಪಾಲಕರ ಕನಸು ನನಸಾಗಿಸುವ ಪ್ರಯತ್ನ ಅಗತ್ಯ ಎಂದರು.
ಕಣ್ಣೂರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರಹಿಮಾನ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಅಗತ್ಯವಿದೆ. ವಿದ್ಯಾರ್ಥಿ ಜೀವನದಲ್ಲಿ ಸಂವಹನದ ಕಲೆ ಅತಿ ದೊಡ್ಡ ಪಾತ್ರ ವಹಿಸುತ್ತದೆ. ಅದರೊಂದಿಗೆ ಅಭಿವೃದ್ಧಿ ಕೌಶಲ, ದೇಹಭಾಷೆ ಬಳಸುವ ಎಂಬ ಬಗ್ಗೆ ಜ್ಞಾನವಿರಬೇಕು ಎಂದರು.
ಪಿ.ಎ.ಶಿಕ್ಷಣ ಸಂಸ್ಥೆಯ ಮ್ಯಾನೇಂಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ದುಬೈಯ ಸಿರಾಜ್ ಹೋಲ್ಡಿಂಗ್ ಇಂಟರ್‌ನ್ಯಾಶನಲ್ ಮ್ಯಾನೇಜಿಂಗ್ ಡೈರೆಕ್ಟರ್ ಖಾದಿರ್ ಪೀರ್ ಷರೀಫ್ ಮುಖ್ಯ ಅತಿಥಿಯಾಗಿದ್ದರು. ಟ್ರಸ್ಟಿ ಅಬ್ದುಲ್ ಲತೀಪ್, ಹಣಕಾಸು ನಿರ್ದೇಶಕ ಅಹ್ಮದ್ ಕುಟ್ಟಿ, ಕ್ಯಾಂಪಸ್ ಎಜಿಎಂ ಡಾ.ಶರ್ಪುದ್ದೀನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪಿ.ಎ.ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ಪದವಿ ಪ್ರಮಾಣ ಬೋಧಿಸಿದರು. ಡಾ.ಸಯ್ಯದ್ ಅಮೀನ್ ಅಹಮ್ಮದ್ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕಾಲೇಜಿನ ಸಿಸಿಎ ಸಂಯೋಜಕ ಇಸ್ಮಾಯಿಲ್ ಶಾಫಿ ಎ.ಎಂ. ಸ್ವಾಗತಿಸಿದರು. ಪಿ.ಎ.ಕಾಲೇಜಿನ ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ವಂದಿಸಿದರು. ಪ್ರೊ.ಫಾತಿಮತ್ ರೈಹಾನ್ ಹಾಗೂ ಡಾ.ಶಬಾಝ್ ಕಾರ್ಯಕ್ರಮ ನಿರೂಪಿಸಿದರು.
ಪಿಎ ಶಿಕ್ಷಣ ಸಂಸ್ಥೆ ಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ ಮುನ್ನಡೆಯುತ್ತಿದೆ. ನಮ್ಮ ಶಿಕ್ಷಣ ಮತ್ತು ಜ್ಞಾನ ಕೇವಲ ಹಣ ಗಳಿಕೆಗೆ ಸೀಮಿತವಾಗದೆ ಉತ್ತಮ ವ್ಯಕ್ತಿತ್ವ ನಿರ್ಮಾಣದೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು. ಅಬ್ದುಲ್ಲಾ ಇಬ್ರಾಹಿಂ ವ್ಯವಸ್ಥಾಪಕ ಟ್ರಸ್ಟಿ, ಪಿ.ಎ.ಶಿಕ್ಷಣ ಸಂಸ್ಥೆ ಜೀವನದಲ್ಲಿ ಏರಿಳಿತಗಳು ಸಹಜ, ನಮ್ಮ ಜೀವನ ಹಾಗೂ ಗೆಲುವನ್ನು ಪ್ರತಿಕ್ಷಣ ಸಂಭ್ರಮಿಸುವ ಮನೋಭಾವ ನಮ್ಮಲ್ಲಿರಬೇಕು, ನಿಮ್ಮ ಸಾಧನೆ ಪಾಲಕರಿಗೆ ಸಲ್ಲಿಸುವ ದೊಡ್ಡ ಗೌರವ. ಖಾದಿರ್ ಪೀರ್ ಷರೀಫ್ ವ್ಯವಸ್ಥಾಪಕ ನಿರ್ದೇಶಕ, ದುಬೈ ಸಿರಾಜ್ ಹೋಲ್ಡಿಂಗ್ ಇಂಟರ್ ನ್ಯಾಶನಲ್