ಕಿಟ್ಟಿ ಗೌಳಿಗೆ ಸ್ನೇಹಿತರ ಹಾರೈಕೆ: ಇದು ಟೀಸರ್ ಅಷ್ಟೇ, ಪಿಕ್ಚರ್ ಬೇರೆನೇ ಇದೆ...

Gowli
Published on

ಬೆಂಗಳೂರು: ‘ನನಗಿಂತ ವಿಜಿ ದೊಡ್ಡೋನು, ಅವನು ಮೊದಲು ಮಾತಾಡ್ಲಿ ...’ ಅಂತ ‘ದುನಿಯಾ’ ವಿಜಯ್ ಕೈಗೆ ಮೈಕು ಕೊಟ್ಟರು ಗಣೇಶ್. ‘ನಮ್ಮೆಲ್ಲರಿಗಿಂತ ಪ್ರೇಮ್ ಸೀನಿಯರ್. ಹಾಗಾಗಿ ಅವರು ಮಾತಾಡಬೇಕು ...’ ಎಂದು ಅವರಿಗೆ ಹಸ್ತಾಂತರಿಸಿದರು ವಿಜಯ್. ಪಕ್ಕದಲ್ಲಿದ್ದ ಪ್ರಜ್ವಲ್, ‘ಈ ಆಟಕ್ಕೆ ನಾನಿಲ್ಲ ...’ ಎಂದು ಹೇಳಿ ತಪ್ಪಿಸಿಕೊಂಡರು. ಕೊನೆಗೆ ಮೈಕ್ ಕೈಗೆತ್ತಿಕೊಂಡ ಪ್ರೇಮ್ ನಾಲ್ಕು ಮಾತಾಡಿದರು. ಇಷ್ಟೆಲ್ಲ ಆಗಿದ್ದು, ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ. ಈ ಚಿತ್ರ ಕಳೆದ ವರ್ಷವೇ ಪ್ರಾರಂಭವಾಗಿ, ಈಗಾಗಲೇ ಅರ್ಧ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ, ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಸಮಾರಂಭಕ್ಕೆ, ಸ್ನೇಹಿತನಿಗೆ ಶುಭ ಹಾರೈಸುವುದಕ್ಕೆ ಗಣೇಶ್, ‘ದುನಿಯಾ’ ವಿಜಯ್, ಪ್ರೇಮ್ ಮತ್ತು ಪ್ರಜ್ವಲ್ ಬಂದಿದ್ದರು. ಎಲ್ಲರೂ ಕಿಟ್ಟಿ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಗೌಳಿ’ ನಿರ್ದೇಶಿಸಿರುವ ಸೂರ ಮಾತನಾಡಿ, ‘ಗೌಳಿಗರು ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ನೆಲೆಸಿದವರು. ಇದೊಂದು ನೈಜ ಘಟನೆ ಆಧರಿಸಿದ ಚಿತ್ರ. ಈ ಘಟನೆ ನಡೆದಿರುವುದು ಬೇರೆ ಕಡೆ. ಅದನ್ನು ಇಲ್ಲಿ ನಡೆದಂತೆ ತೋರಿಸಿದ್ದೇವೆ. ಈ ಕಥೆ ಮಾಡಿಕೊಂಡಾಗ ಗೌಳಿಯ ಪಾತ್ರವನ್ನು ಕಿಟ್ಟಿ ಅವರಿಂದಲೇ ಮಾಡಿಸಬೇಕು ಅಂತ ಆಸೆ ಇತ್ತು. ಕಥೆ ಮತ್ತು ಪಾತ್ರ ಕೇಳಿ ಅವರೂ ಒಪ್ಪಿದರು. ಶಿರಸಿ, ಯಲ್ಲಾಪುರ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ಕೊಟ್ಟರು.

ಈ ಚಿತ್ರದ ಪ್ರತಿಯೊಂದು ಶಾಟ್ ಸಹ ನಿರ್ದೇಶಕರ ಕನಸು ಎಂದು ಮಾತು ಶುರು ಮಾಡಿದ ಕಿಟ್ಟಿ, ‘ಈ ಟೀಸರ್ ಬರೀ ಸ್ಯಾಂಪಲ್ ಅಷ್ಟೇ. ಚಿತ್ರದಲ್ಲಿ ಇನ್ನೂ ಹಲವು ವಿಶೇಷತೆಗಳಿವೆ. ಇದರ ನೂರರಷ್ಟು ಎಫೆಕ್ಟ್ ಚಿತ್ರದಲ್ಲಿರುತ್ತದೆ’ ಎಂದರು. ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪಾವನಾ ಗೌಡ, ರಂಗಾಯಣ ರಘು, ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ, ನಿರ್ವಪಕ ರಘು ಸಿಂಗಂ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net