KSRTC Employees : ದೇಶದಲ್ಲೇ ಮೊದಲ ಬಾರಿ ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ನಗದುರಹಿತ ಚಿಕಿತ್ಸೆ ವ್ಯವಸ್ಥೆ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಹೊಸ ವರ್ಷದ ಉಡುಗೊರೆ ನೀಡಿದೆ. ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ಪೈಕಿ ಮೊದಲ ಹಂತದಲ್ಲಿ ಜ.6ರಂದು ಕೆಎಸ್ಆರ್ಟಿಸಿ ಸಿಬ್ಬಂದಿಗೆ ಅನ್ವಯಿಸುವಂತೆ ಚಿಕಿತ್ಸಾ ವೆಚ್ಚದ ಮಿತಿ ಇರದ ಆರೋಗ್ಯ ಯೋಜನೆ ಜಾರಿಗೆ ಬರಲಿದೆ. ಆ ಬಳಿಕ ಉಳಿದ ಮೂರು ನಿಗಮಗಳಾದ ಬಿಎಂಟಿಸಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರಿಗೂ ಸೌಲಭ್ಯ ಸಿಗಲಿದೆ.
| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಈವರೆಗೆ ವೆಚ್ಚದ ಮರುಪಾವತಿ ವ್ಯವಸ್ಥೆ ಇತ್ತು. ಇದರನ್ವಯ ಚಿಕಿತ್ಸೆಗೆ ಮುಂಗಡ ಹಣ ಪಾವತಿಸಿ ಬಳಿಕ ನಿಗಮದಿಂದ ಪಡೆಯಬೇಕಾಗಿತ್ತು. ಇದರಿಂದ ನೌಕರರಿಗೆ ಸಾಲ ಮಾಡುವುದು ಅನಿವಾರ್ಯವಾಗಿತ್ತು. ಹೀಗಾಗಿಯೇ ನಾಲ್ಕು ನಿಗಮಗಳ ನೌಕರರ ಬಹುದಿನಗಳ ಬೇಡಿಕೆಯಂತೆ ನಗದು ರಹಿತ ಚಿಕಿತ್ಸಾ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಕನಿಷ್ಠ 6 ಜನರಿಗೆ ಸೌಲಭ್ಯ: ಕೆಎಸ್ಆರ್ಟಿಸಿಯ 34 ಸಾವಿರ ನೌಕರರೂ ಸೇರಿ ನಾಲ್ಕು ನಿಗಮಗಳಲ್ಲಿ ಒಟ್ಟಾರೆ 1.15 ಲಕ್ಷ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರ ಅವರ ಪತಿ ಅಥವಾ ಪತ್ನಿ, ಮಿತಿ ಇಲ್ಲದ ಮಕ್ಕಳ ಸಂಖ್ಯೆ ಹಾಗೂ ಪಾಲಕರಿಗೆ ಈ ಸೌಲಭ್ಯ ನೀಡಲಾಗುತ್ತದೆ. ಇದರಿಂದಾಗಿ ಒಂದು ಕುಟುಂಬದ ಕನಿಷ್ಠ 6 ಜನರಿಗೆ ನಗದುರಹಿತ ಆರೋಗ್ಯ ಸೇವೆ ಲಭ್ಯವಾಗುತ್ತದೆ. ಒಟ್ಟಾರೆ 7 ಲಕ್ಷ ಜನ ಈ ಸೌಲಭ್ಯ ಪಡೆಯಲಿದ್ದಾರೆ.
ಸೆಮಿ ಸ್ಪೆಷಲ್ ವಾರ್ಡ್: ಅಧಿಕಾರಿಯಿಂದ ಹಿಡಿದು ನಿಗಮದ ಕಟ್ಟಕಡೆಯ ನೌಕರನಿಗೂ ಸೆಮಿಸ್ಪೆಷಲ್ ವಾರ್ಡ್ ನೀಡಲಾಗುತ್ತದೆ. ಯಾರಾದರೂ ಅಧಿಕಾರಿ ಅಥವಾ ನೌಕರ ಸ್ಪೆಷಲ್ ವಾರ್ಡ್ ಬೇಕೆಂದರೆ ಹೆಚ್ಚುವರಿ ಹಣವನ್ನು ವೈಯಕ್ತಿಕವಾಗಿ ಭರಿಸಬೇಕಾಗುತ್ತದೆ. ನೌಕರರಿಗೆ ನೀಡುವ ಸೌಲಭ್ಯಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್ಎಸ್) ನಿಯಮಗಳನ್ನೇ ಅನುಸರಿಸಲಾಗುತ್ತದೆ. ದರಗಳು ಸಹ ಅದರಂತೆ ನಿಗದಿಯಾಗಿವೆ.
ಪ್ರತ್ಯೇಕ ಟ್ರಸ್ಟ್ ರಚನೆ: ನೌಕರರ ನಗದು ರಹಿತ ಚಿಕಿತ್ಸೆಗಾಗಿ ಪ್ರತಿ ನಿಗಮದಲ್ಲೂ ಪ್ರತ್ಯೇಕ ಟ್ರಸ್ಟ್ ರಚಿಸಲಾಗುತ್ತದೆ. ಅಧಿಕಾರಿಗಳ ಜತೆಗೆ ಮೂವರು ನೌಕರ ಪ್ರತಿನಿಧಿಗಳು ಟ್ರಸ್ಟ್ನಲ್ಲಿರುತ್ತಾರೆ. ಅದರಲ್ಲಿ ಒಬ್ಬ ಚಾಲಕ, ಒಬ್ಬ ನಿರ್ವಾಹಕ ಹಾಗೂ ಒಬ್ಬ ಮೆಕ್ಯಾನಿಕ್ಗೆ ಅವಕಾಶ ನೀಡಲಾಗಿದೆ. ಕೆಎಸ್ಆರ್ಟಿಸಿಯಲ್ಲಿ ವಾರ್ಷಿಕ 20 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.
ಆರೋಗ್ಯ ಕಾರ್ಡ್ ವಿತರಣೆ: ಪ್ರತಿ ನೌಕರರಿಗೂ ಪ್ರತ್ಯೇಕ ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿನ ಕ್ಯೂ ಆರ್ ಕೋಡ್ ಸ್ಕಾ್ಯನ್ ಮಾಡಿದರೆ ನೌಕರರ ವಿವರ ಲಭ್ಯವಾಗುತ್ತದೆ. ಆಸ್ಪತ್ರೆ ಬಿಲ್ಗಳನ್ನು ತಂದು ಟ್ರಸ್ಟ್ಗೆ ನೀಡುವಂತಿಲ್ಲ. ಆನ್ಲೈನ್ ಮೂಲಕವೇ ರವಾನೆಯಾಗುತ್ತವೆ. 30 ದಿನಗಳಲ್ಲಿ ಆಸ್ಪತ್ರೆಗೆ ಹಣ ಪಾವತಿಯಾಗಲಿದೆ.
ನಿಗಮಕ್ಕೊಂದು ಹೆಸರು: ಆಯಾ ನಿಗಮಗಳು ಯೋಜನೆಗೆ ತಮ್ಮದೇ ಆದ ಹೆಸರು ಕೊಟ್ಟುಕೊಳ್ಳಲಿವೆ. ಕೆಎಸ್ಆರ್ಟಿಸಿ ಆರೋಗ್ಯ ಎಂಬ ಹೆಸರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಿದೆ. ಅದೇ ರೀತಿ ಬಿಎಂಟಿಸಿ ಆರೋಗ್ಯ, ಕೆಕೆ ಸಾರಿಗೆ ಆರೋಗ್ಯ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಆರೋಗ್ಯವೆಂಬ ಹೆಸೆರನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹೃದಯಾಘಾತ ನಿಯಂತ್ರಣ: ಜಯದೇವ ಆಸ್ಪತ್ರೆಯ ಸಹಯೋಗದಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೃದ್ರೋಗ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಕೆಎಸ್ಆರ್ಟಿಸಿಯ 11062 ಜನರಿಗೆ ತಪಾಸಣೆ ಮಾಡಿಸಲಾಗಿದೆ. ಅದರಲ್ಲಿ 39 ಜನರಿಗೆ ಸ್ಟಂಟ್ ಹಾಕಿಸಲಾಗಿದೆ. 8 ಜನರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ನಿಗಮ 1.39 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಇದರಿಂದ ನಿಗಮದ ನೌಕರರಲ್ಲಿ ಆಗುತ್ತಿದ್ದ ಹೃದಯಘಾತ ಪ್ರಮಾಣ ಶೇ.50 ಕಡಿಮೆಯಾಗಿದೆ.
225 ಆಸ್ಪತ್ರೆಗಳಲ್ಲಿ ಚಿಕಿತ್ಸೆ
ರಾಜ್ಯಾದ್ಯಂತ 225 ಆಸ್ಪತ್ರೆಗಳನ್ನು ಈ ಯೋಜನೆಗಾಗಿ ನೋಂದಣಿ ಮಾಡಲಾಗಿದೆ. ಅದರಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ನಾರಾಯಣ ಹೃದಯಾಲಯ, ಎಚ್ಸಿಜಿ, ಮೈಸೂರಿನ ಜೆಎಸ್ಎಸ್ ಸೇರಿದಂತೆ ಎಲ್ಲ ಪ್ರಮುಖ ಆಸ್ಪತ್ರೆಗಳಿವೆ. ಕಣ್ಣಿನ ಚಿಕಿತ್ಸೆಯಿಂದ ಹಿಡಿದು ಎಲ್ಲ ರೀತಿಯ ಅನಾರೋಗ್ಯಕ್ಕೂ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಗೆ ಗರಿಷ್ಠ ಮಿತಿಯನ್ನು ನಿಗದಿ ಮಾಡಿಲ್ಲ.
ಸಾರಿಗೆ ನೌಕರರ ಹಾಗೂ ಅವರ ಅವಲಂಬಿತರ ಆರೋಗ್ಯ ರಕ್ಷಿಸುವುದಕ್ಕಾಗಿ ನಗದು ರಹಿತ ಸೇವೆ ಜಾರಿಗೆ ತರಲಾಗುತ್ತಿದೆ. ಇದು ನೌಕರರ ಬಹುದಿನದ ಬೇಡಿಕೆಯಾಗಿತ್ತು. ಕೆಎಸ್ಆರ್ಟಿಸಿಯಲ್ಲಿ ಮೊದಲು ಜಾರಿ ಮಾಡುತ್ತೇವೆ. ನಂತರ ಉಳಿದ ನಿಗಮಗಳಿಗೆ ವಿಸ್ತರಿಸಲಾಗುವುದು.
| ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
ವಂತಿಕೆ ಎಷ್ಟು?
ಪ್ರತಿ ನೌಕರರಿಂದ ವಂತಿಕೆ 650 ರೂ. ನಿಗದಿ ಮಾಡಲಾಗಿದೆ. ವಾರ್ಷಿಕ 50 ರೂ. ಹೆಚ್ಚಿಗೆ ಪಡೆಯಲಾಗುತ್ತದೆ. ನಿಗಮಗಳು ವಾರ್ಷಿಕ ಶೇ.5 ಹೆಚ್ಚಿಗೆ ಪಾವತಿ ಮಾಡಲಿದೆ. ತರಬೇತಿಯಲ್ಲಿರುವ ನೌಕರರಿಗೆ ವಂತಿಕೆ ಇಲ್ಲದೆ ಚಿಕಿತ್ಸೆ ನೀಡಲಾಗುತ್ತದೆ.
ಇಡೀ ದೇಶದಲ್ಲಿ ಯಾವುದೇ ಸಾರಿಗೆ ನಿಗಮದಲ್ಲೂ ನೌಕರರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯವಿಲ್ಲ. ನೌಕರರ ಚಿಕಿತ್ಸೆ, ಔಷಧ ಎಲ್ಲವನ್ನೂ ನೀಡಲಾಗುತ್ತದೆ. ನೌಕರರಿಗೆ ಆರೋಗ್ಯ ಕಾರ್ಡ್ ನೀಡುತ್ತೇವೆ. ಅದನ್ನು ತೆಗೆದುಕೊಂಡು ಹೋದರೆ ನೋಂದಣಿಯಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತದೆ. ಜ.6ಕ್ಕೆ ಸಿಎಂ ಯೋಜನೆಗೆ ಚಾಲನೆ ನೀಡುತ್ತಾರೆ.
| ಎಸ್.ಆರ್. ಶ್ರೀನಿವಾಸ್, ಅಧ್ಯಕ್ಷ, ಕೆಎಸ್ಆರ್ಟಿಸಿ
ಶಕ್ತಿ ಯೋಜನೆಯ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಲಿದೆ ಆಂಧ್ರ ಪ್ರದೇಶ ಸಚಿವರ ತಂಡ! Karnataka Shakti scheme