

Karnataka Shakti scheme : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಿರುವುದರಲ್ಲಿ ಸಂದೇಹವೇ ಇಲ್ಲ. ಮಹಿಳೆಯರಿಗಾಗಿಯೇ ಉಚಿತ ಸಾರಿಗೆ ವ್ಯವಸ್ಥೆಯನ್ನು ಒಳಗೊಂಡಿರುವ ಈ ಯೋಜನೆಯಿಂದ ತಮ್ಮ ಪ್ರವಾಸದ ಅಭಿರುಚಿಯನ್ನು ಮಾತ್ರ ಮಹಿಳೆಯರು ಪೂರೈಸಿಕೊಂಡಿಲ್ಲ, ಆರ್ಥಿಕ ಉಳಿತಾಯಕ್ಕೂ ಇದು ಸಹಕಾರಿಯಾಗಿದೆ. ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಈ ಯೋಜನೆಯ ಅಧ್ಯಯನಕ್ಕೆಂದೇ ಪಕ್ಕದ ಆಂಧ್ರ ಪ್ರದೇಶ ಸರ್ಕಾರದ ಸಚಿವರ ನಿಯೋಗ ರಾಜ್ಯಕ್ಕೆ ಆಗಮಿಸಲಿದೆ.
ಆಂಧ್ರದ ಸಾರಿಗೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ಶೆಟ್ಟಿ, ಗೃಹ ಮತ್ತು ವಿಪತ್ತು ನಿರ್ವಹಣೆ ಸಚಿವೆ ವಂಗಲಪುಡಿ ಅನಿತಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಗುಮ್ಮಟ್ಟಿ ಸಂಧ್ಯಾರಾಣಿ ಅವರು ಜನವರಿ 2ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಚಿವರ ನೇತೃತ್ವದಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾಂತಿಲಾಲ್ ದಂಡೆ (ಐಎಎಸ್) ಹಾಗೂ ಹಣಕಾಸು ಇಲಾಖೆಯ ಕಾರ್ಯದರ್ಶಿ ಡಿ. ರೊನಾಲ್ಡ್ ರೋಸ್ ಸೇರಿದಂತೆ ಆಂಧ್ರ ಸರ್ಕಾರದ 12 ಅಧಿಕಾರಿಗಳ ತಂಡವೂ ಕೂಡ ಆಗಮಿಸಲಿದೆ.
ಆಂಧ್ರದಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ಅಲ್ಲಿನ ಸರ್ಕಾರ ಆಸಕ್ತವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ. ರಾಜ್ಯದ ಅಧಿಕಾರಿಗಳು ಯೋಜನೆ ಜಾರಿಗೆ ಸಂಬಂಧಿಸಿದಂತೆ ಜ.3ರಂದು ಬೆಳಗ್ಗೆ 11.30ಕ್ಕೆ ಪ್ರಾತ್ಯಾಕ್ಷಿಕೆಯನ್ನು ಪ್ರಸ್ತುತ ಪಡಿಸಲಿದ್ದಾರೆ.
ಈ ಬಗ್ಗೆ ವಿಜಯವಾಣಿ ಡಿಜಿಟಲ್ ಜತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆಂಧ್ರ ಸಚಿವರ ನಿಯೋಗ ಭೇಟಿಯ ಸಂದರ್ಭದಲ್ಲಿ ಶಕ್ತಿ ಯೋಜನೆಯ ಯಶಸ್ಸು, ಸಾರಿಗೆ ನೌಕರರ ಕಲ್ಯಾಣಕ್ಕಾಗಿ ಸರ್ಕಾರ ತೆಗೆದುಕೊಂಡ ಕ್ರಮಗಳು, ರಾಜ್ಯದ ಸಾರಿಗೆ ಬಸ್‌ನಲ್ಲಿ ಯುಪಿಐ ಮೂಲಕ ಬಸ್ ಟಿಕೆಟ್ ಪಾವತಿ, ಸರ್ಕಾರಿ ಸಾರಿಗೆ ಮೂಲಸೌಕರ್ಯ ಸೇರಿದಂತೆ ಸಾರಿಗೆ ಇಲಾಖೆಯ ಮಹತ್ವದ ಸುಧಾರಣಾ ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ ಎಂದು ಹೇಳಿದರು. ಅಲ್ಲದೆ, ರಾಜ್ಯದಲ್ಲಿ ಇದುವರೆಗೂ 300 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಅಂದಹಾಗೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯನ್ನು ಮೊದಲು ಜಾರಿಗೆ ತರಲಾಗಿತ್ತು. ಕೋಟ್ಯಂತರ ಮಹಿಳೆಯರು ಶಕ್ತಿ ಯೋಜನೆ ಸದುಪಯೋಗ ಮಾಡಿಕೊಂಡಿದ್ದಾರೆ. ಯೋಜನೆಯು ಜಾರಿಯಾದಾಗಿನಿಂದ ರಾಜ್ಯದ ಸುಮಾರು 350.90 ಕೋಟಿ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಂಡಿದ್ದಾರೆ. ಶಕ್ತಿ ಯೋಜನೆಯಡಿ ಈವರೆಗೂ (15.12.2024) ಒಟ್ಟು 601.84 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಈ ಪೈಕಿ 350.90 ಕೋಟಿ ಮಹಿಳಾ ಪ್ರಯಾಣಿಕರಾಗಿರುತ್ತಾರೆ. ಅಂದರೆ, ಶೇ.58.30 ರಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ. ಮಹಿಳಾ ಪ್ರಯಾಣಿಕರ ಶೂನ್ಯ ಟಿಕೆಟ್ ಮೌಲ್ಯ ರೂ.8481.67 ಕೋಟಿಗಳಾಗಿದೆ.
ಇನ್ನು ಶಕ್ತಿ ಯೋಜನೆ ಕಳೆದ ಜೂನ್ 11ಕ್ಕೆ ಒಂದು ವರ್ಷ ಪೂರೈಸಿತು. ಈ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ 5481.40 ಕೋಟಿ ರೂ. ಭರ್ಜರಿ ಆದಾಯ ಸಹ ಗಳಿಸಿತು. ಈ ಅವಧಿಯಲ್ಲಿ ಒಟ್ಟು 390.58 ಕೋಟಿ ಜನರು ಬಸ್‌ನಲ್ಲಿ ಪ್ರಯಾಣಿಸಿದ್ದರೆ, ಇದರಲ್ಲಿ 225.15 ಕೋಟಿ ಮಹಿಳೆಯರೇ ಪ್ರಯಾಣಿಸಿರುವುದು ವಿಶೇಷ. ಇಂದಿಗೂ ವೀಕೆಂಡ್ ಬಂತೆಂದರೆ ಸಾಕು ಬಸ್ಗಳು ಫುಲ್ ರಶ್ ಆಗುತ್ತವೆ. ಸಾಮಾನ್ಯ ದಿನಗಳಲ್ಲೂ ಬಸ್ಗಳು ತುಂಬಿ ತುಳುಕುತ್ತಿರುತ್ತವೆ. ನಿತ್ಯ ಸುಮಾರು 50 ರಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಕೆಲಸಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಮಹಿಳೆಯರಿಗೆ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಹೀಗಾಗಿ ಈ ಯೋಜನೆ ಹೀಗೆ ಮುಂದುವರಿಯಲಿ ಎಂದು ಮಹಿಳೆಯರು ಬಯಸಿದ್ದು, ಸರ್ಕಾರವೂ ಕೂಡ ಮುಂದುವರಿಸುವುದಾಗಿ ಭರವಸೆಯನ್ನು ನೀಡಿದೆ.